ಬೆಂಗಳೂರು: ಇಂದಿರಾ ಗಾಂಧಿಯವರ ಜನ್ಮ ಜಯಂತಿ ಪ್ರಯುಕ್ತ ಅವರ ನುಡಿ ಮತ್ತುಗಳ ಸಂಗ್ರಹದ ಪುಸ್ತಕವನ್ನು ಬಿಡುಗಡೆಗೊಳಿಸಲಾಗಿದೆ. ಪುಸ್ತಕಕ್ಕೆ 100 ರೂ. ಕೊಟ್ಟು ತೆಗೆದುಕೊಂಡು ಹೋಗಿ ಎಂದು ಡಿಕೆ ಶಿವಕುಮಾರ್ ವೇದಿಕೆಯಲ್ಲಿ ತಾಕೀತು ಮಾಡಿದ್ದಾರೆ.
ಕೆಪಿಸಿಸಿ ಕಚೇರಿ ಭಾರತ ಜೋಡೋ ಭವನದಲ್ಲಿ ಬುಧವಾರ ನಡೆದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ ಅವರು ಇಂದಿರಾ ಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಇಂದಿರಾ ಗಾಂಧಿ ಅವರ ನುಡಿಮುತ್ತುಗಳ ಸಂಗ್ರಹದ ಪುಸ್ತಕ ಅನಾವರಣಗೊಳಿಸಿದರು.
ಈ ಪುಸ್ತಕದ ಕೃತಿ ಸ್ವಾಮ್ಯ ಹಕ್ಕು ಈಗಲೂ ರಾಹುಲ್ ಗಾಂಧಿ ಬಳಿಯಿದೆ. ಇದನ್ನು ನೋಡಿ ನನಗೆ ಈ ನುಡಿಮುತ್ತುಗಳು ಕನ್ನಡಿಗರಿಗೂ ತಲುಪಬೇಕು ಎನಿಸಿತು. ಅದಕ್ಕಾಗಿ ನಾನು ಕನ್ನಡಕ್ಕೆ ತರ್ಜುಮೆ ಮಾಡಿದ್ದೇನಷ್ಟೇ. ಇದು ಮಾರಾಟಕ್ಕಾಗಿ ಅಲ್ಲ. ಹಾಗಂತ ಯಾರೂ ಫ್ರೀ ಆಗಿ ತೆಗೆದುಕೊಂಡು ಹೋಗಬೇಡಿ. 100 ರೂ. ಕೊಟ್ಟು ತೆಗೆದುಕೊಂಡು ಹೋಗಿ. ಆ ಹಣ ನನಗಲ್ಲ. ಕಾಂಗ್ರೆಸ್ ಭವನ ಕಟ್ಟಲು ದೇಣಿಗೆಯಾಗುತ್ತದೆ ಎಂದು ವೇದಿಕೆಯಲ್ಲೇ ನೆರೆದಿದ್ದವರಿಗೆ ತಾಕೀತು ಮಾಡಿದ್ದಾರೆ.