ಬೆಂಗಳೂರು: ರಾಜ್ಯದಲ್ಲಿ ಸದ್ಯಕ್ಕೆ ನಾಯಕತ್ವ ಬದಲಾವಣೆ ಬೇಡ ಎಂದಿರುವ ಹೈಕಮಾಂಡ್ ಮುಂದೆ ಡಿಸಿಎಂ ಡಿಕೆ ಶಿವಕುಮಾರ್ ನಾಲ್ಕು ಪ್ರಮುಖ ಬೇಡಿಕೆ ಮುಂದಿಟ್ಟಿದ್ದಾರೆ ಎಂಬ ಗುಸು ಗುಸು ಕೇಳಿಬರುತ್ತಿದೆ.
ಮಾಧ್ಯಮಗಳ ಮುಂದೆ ನನಗೇನೂ ಗೊತ್ತಿಲ್ಲ, ನಾನು ಸಿಎಂ ಹುದ್ದೆಗೆ ಬೇಡಿಕೆಯಿಟ್ಟಿಲ್ಲ, ಪಕ್ಷ ಕೊಟ್ಟ ಕೆಲಸ ಮಾಡುತ್ತೇನೆ ಎಂದು ಹೇಳಿಕೊಂಡರೂ ದೆಹಲಿಗೆ ತೆರಳಿರುವ ಡಿಕೆ ಶಿವಕುಮಾರ್ ಹೈಕಮಾಂಡ್ ಮುಂದೆ ಸಿಎಂ ಹುದ್ದೆಗಾಗಿ ಲಾಭಿ ನಡೆಸಿದ್ದಾರೆ ಎನ್ನಲಾಗಿದೆ. ಆದರೆ ಅದು ಸಾಧ್ಯವಾಗದೇ ಇದ್ದಿದ್ದಕ್ಕೆ ನಾಲ್ಕು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಅಷ್ಟಕ್ಕೂ ಡಿಕೆಶಿ ಇಟ್ಟಿರು ನಾಲ್ಕು ಬೇಡಿಕೆಗಳೇನು?
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಡಿಕೆ ಶಿವಕುಮಾರ್ ಕಷ್ಟಪಟ್ಟು ಪಕ್ಷ ಗೆಲ್ಲಿಸಿದ್ದರೂ ಅವರಿಗೆ ಸಿಎಂ ಸ್ಥಾನ ಸಿಗುತ್ತಿಲ್ಲ ಎಂಬ ಬೇಸರ ಅವರ ಬೆಂಬಲಿಗರಲ್ಲೂ ಇದೆ. ಹೀಗಾಗಿ 2028 ರ ವಿಧಾನಸಭೆ ಚುನಾವಣೆಗೆ ಯಾರ ನಾಯಕತ್ವ, ಯಾರು ಸಿಎಂ ಅಭ್ಯರ್ಥಿ ಎಂದು ಅಧಿಕೃತ ಒಪ್ಪಂದವಾಗಬೇಕು ಎಂದು ಬೇಡಿಕೆಯಿಟ್ಟಿದ್ದಾರಂತೆ.
ಇದಲ್ಲದೆ, ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಹುದ್ದೆ ಮೇಲೆ ಪಕ್ಷದೊಳಗೇ ಕೆಲವರಿಗೆ ಕಣ್ಣಿದೆ. ಹೀಗಾಗಿ ಸದ್ಯಕ್ಕೆ ಸಿಎಂ ಸ್ಥಾನ ನೀಡದೇ ಇದ್ದರೆ ಕೆಪಿಸಿಸಿ ಅಧ್ಯಕ್ಷ ಹುದ್ದೆಯಲ್ಲೂ ಬದಲಾವಣೆ ಮಾಡಬಾರದು ಎಂದು ಡಿಕೆಶಿ ಡಿಮ್ಯಾಂಡ್ ಮಾಡಿದ್ದಾರೆ.
ಅಷ್ಟೇ ಅಲ್ಲ, ಕೆಪಿಸಿಸಿಯಲ್ಲಿ ಫ್ರೀ ಹ್ಯಾಂಡ್ ಇರಬೇಕು, ಟಿಕೆಟ್ ಹಂಚಿಕೆ ವಿಚಾರದಲ್ಲೂ ತಮ್ಮದೇ ಸ್ವಾತಂತ್ರ್ಯವಿರಬೇಕು ಎಂದು ಕೇಳಿದ್ದಾರಂತೆ. ಇದಲ್ಲದೆ, ಸಂಪುಟ ವಿಸ್ತರಣೆಯಾದರೆ ತಮ್ಮ ಆಪ್ತರಿಗೆ ಪ್ರಾಶಸ್ತ್ಯ ನೀಡಬೇಕು ಎಂಬ ದೊಡ್ಡ ಬೇಡಿಕೆಯನ್ನು ಹೈಕಮಾಂಡ್ ಮುಂದಿಟ್ಟಿದ್ದಾರೆ ಎನ್ನಲಾಗಿದೆ.