ಬೆಂಗಳೂರು: ರಾಜ್ಯದಲ್ಲಿ ಇಷ್ಟೆಲ್ಲಾ ಸಮಸ್ಯೆ ಇರುವಾಗ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಗೆ ದಿನಗಟ್ಟಲೆ ದೆಹಲಿಗೆ ಹೋಗಿ ಕೂರುವ ಘನಂದಾರಿ ಕೆಲಸ ಏನಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಪ್ರಶ್ನೆ ಮಾಡಿದ್ದಾರೆ.
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ದೆಹಲಿಗೆ ಹೋಗಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುತ್ತಿರುವುದರ ಬಗ್ಗೆ ಪ್ರತಿಕ್ರಿಯಿಸಿರುವ ಅವರು ಡಿಕೆ ಶಿವಕುಮಾರ್, ಸಿದ್ದರಾಮಯ್ಯನವರು ಆ ಥರದ್ದು ಏನೂ ಇಲ್ಲ ಅಂತಿದ್ದಾರೆ. ಹಾಗಿದ್ದರೆ ಡೆಲ್ಲಿಗೆ ಹೋಗಿದ್ದು ಯಾಕೆ? ಆಹ್ವಾನ ಕೊಡಲು ಹೋಗಿದ್ದರೆ ಅದು ಐದು ನಿಮಿಷದ ಕೆಲಸ. ಡಿಕೆ ಸುರೇಶ್, ಡಿಕೆಶಿ ಅಣ್ಣ ತಮ್ಮ ಹೋಗಿ ಡೆಲ್ಲಿಯಲ್ಲಿ ಹೋಗಿ ಕೂರೋ ಅವಶ್ಯಕತೆ ಏನಿತ್ತು?
ಅಂದರೆ ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ನಾಯಕರ ನಡುವೆ ಎರಡೂವರೆ ವರ್ಷದ ಒಪ್ಪಂದ ಆಗಿರೋದು ನಿಜ. ಇಲ್ಲಾಂದ್ರೆ ಇಷ್ಟು ದಿನ ಹೋಗಿ ದೆಹಲಿಗೆ ಹೋಗಿ ಕೂರುವ ಅವಶ್ಯಕತೆಯೇ ಬರುತ್ತಿರಲಿಲ್ಲ. ಅಂದರೆ ಕಾಂಗ್ರೆಸ್ ಈಗ ಗೊಂದಲದ ಗೂಡಾಗಿದೆ.
ಯಾವ ಕಾಂಗ್ರೆಸ್ ಅಭಿವೃದ್ಧಿ ಚಿಂತನೆ ಮಾಡಬೇಕಿತ್ತು, ರೈತರ ಸಮಸ್ಯೆ ಕೇಳಬೇಕಿತ್ತು. ಒಂದು ಕಡೆ ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರದಿಲ್ಲ. ಒಂದು ಕಡೆ ಕಾಡುಮೃಗಗಳ ದಾಳಿಯಿಂದ ಜನ ಸಾಯ್ತಿದ್ದಾರೆ. ಇನ್ನೊಂದು ಕಡೆ ಕೃಷ್ಣಮೃಗಗಳು ಸಾಯ್ತಿದ್ದಾರೆ. ಅಂತಹದ್ದೆಲ್ಲಾ ಸಮಸ್ಯೆಯಿದ್ದರೆ ದೆಹಲಿಗೆ ಹೋಗಿ ಕೂರುವ ಘನಂದಾರಿ ಕೆಲಸ ಏನಿದೆ.
ಕರ್ನಾಟಕದಲ್ಲಿ ಈಗ ಅಧಿಕಾರದ ಕುರ್ಚಿಗಾಗಿ ಮ್ಯೂಸಿಕಲ್ ಚೇರ್ ನಡೆಯುತ್ತಿದೆ. ಅದಕ್ಕಾಗಿ ದೆಹಲಿಗೆ ಹೋಗಿದ್ದಾರೆ. ಮೊನ್ನೆ ಯಾಕೆ ಎಲ್ಲಾ ಮಂತ್ರಿಗಳು ಖರ್ಗೆಯವರನ್ನು ಭೇಟಿ ಮಾಡಿದರು? ಇನ್ನು ಕೆಲವು ಎಂಎಲ್ಎ ಗಳು ಬಟ್ಟೆ ಹೊಲಿಸಿಕೊಂಡು ಸಚಿವರಾಗುವುದಕ್ಕೆ ಪೆರೇಡ್ ಮಾಡ್ತಿದ್ದಾರೆ? ಬಿಹಾರ ಚುನಾವಣೆ ಆದ ಮೇಲೆ ರಾಹುಲ್ ಗಾಂಧಿಯವರಿಗೆ ಮುಖ ತೋರಿಸಕ್ಕೆ ಆಗ್ತಿಲ್ಲ. ಅವರು ಗೂಡು ಸೇರಿಕೊಂಡಿದ್ದಾರೆ. ಹೀಗಾಗಿ ಇವರು ಅಲ್ಲಿಗೆ ಹೋಗಿ ಅಧಿಕಾರ ಹಸ್ತಾಂತರದ ವಿಚಾರವನ್ನು ಚರ್ಚೆ ಮಾಡ್ತಿದ್ದಾರೆ ಎಂದು ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.