ಬೆಂಗಳೂರು: ಸಿಎಂ ಸಿದ್ದರಾಮಯ್ಯ ಕುಟುಂಬದ ವಿರುದ್ಧದ ಮುಡಾ ಹಗರಣ ಸಂಬಂಧ ಶನಿವಾರ ಲೋಕಾಯುಕ್ತರು ತನಿಖಾ ಸ್ಥಿತಿಗತಿ ವರದಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಲ್ಲಿಸಿದ್ದ ಖಾಸಗಿ ದೂರಿನ ವಿಚಾರಣೆಯನ್ನು ಇಂದು ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ನಡೆಸಿತು.
ದೂರಿನಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನಗಳನ್ನು ಸಿಎಂ ಕುಟುಂಬದ ಸದಸ್ಯರಿಗೆ ಹಂಚಿಕೆ ಮಾಡುವಲ್ಲಿ ಮುಖ್ಯಮಂತ್ರಿ ಮತ್ತು ಇತರರು ಅಕ್ರಮ ನಡೆಸಿದ್ದಾರೆ ಎಂದು ಗಂಭೀರ ಆರೋಪ ಮಾಡಲಾಗಿದೆ.
ಸಂಕ್ಷಿಪ್ತ ವಿಚಾರಣೆಯ ಸಮಯದಲ್ಲಿ, ಲೋಕಾಯುಕ್ತದ SPP ಮುಡಾ ಸಂಬಂಧಿತ ಆರೋಪಗಳ ಕುರಿತು ನಡೆಯುತ್ತಿರುವ ತನಿಖೆಯ ಸ್ಥಿತಿಗತಿ ವರದಿಯನ್ನು ಸಲ್ಲಿಸಿದರು. ವರದಿಯ ಪ್ರತಿಯನ್ನು ದೂರುದಾರರಿಗೆ ಹಸ್ತಾಂತರಿಸಲಾಯಿತು.
ತನಿಖೆ ಪ್ರಗತಿಯಲ್ಲಿರುವ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಿದ ಪ್ರಾಸಿಕ್ಯೂಟರ್, ಹೆಚ್ಚಿನ ವಿವರವಾದ ವರದಿ ಸಲ್ಲಿಸಲು ಹೆಚ್ಚಿನ ಸಮಾಯವಕಾಶವನ್ನು ಕೋರಿದರು. ಸಲ್ಲಿಕೆಯನ್ನು ಸ್ವೀಕರಿಸಿದ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಡಿಸೆಂಬರ್ 4 ಕ್ಕೆ ಮುಂದೂಡಿತು.