ಸೋನಭದ್ರ: ಬಿಹಾರದಲ್ಲಿ ಎನ್‌ಡಿಎ ಭರ್ಜರಿ ಜಯ ಸಾಧಿಸಿದ ಒಂದು ದಿನದ ನಂತರ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶನಿವಾರ ಎರಡು ರಾಜ್ಯಗಳ ನಡುವಿನ ಸಂಬಂಧವನ್ನು ಭಗವಾನ್ ರಾಮ ಮತ್ತು ಸೀತಾ ಮಾತೆಯ ನಡುವಿನ “ಮುರಿಯಲಾಗದ ಮತ್ತು ಬಲವಾದ” ಬಾಂಧವ್ಯಕ್ಕೆ ಹೋಲಿಸಿದ್ದಾರೆ.
548 ಕೋಟಿ ಮೌಲ್ಯದ 432 ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಆದಿತ್ಯನಾಥ್ ಅವರು, ಉತ್ತರ ಪ್ರದೇಶ ಮತ್ತು ಬಿಹಾರ ಪರಸ್ಪರ ಸಂಸ್ಕೃತಿ, ಪರಂಪರೆ ಮತ್ತು ಸಂಕಲ್ಪವನ್ನು ಹಂಚಿಕೊಂಡಿವೆ. ರಾಮ ಮತ್ತು ಜಾನಕಿ ಮಾತೆಯ (ಸೀತೆ) ನಡುವಿನ ಪವಿತ್ರ ಬಾಂಧವ್ಯದಂತೆಯೇ ಎರಡು ರಾಜ್ಯಗಳ ನಡುವಿನ ಸಂಬಂಧವೂ ಮುರಿಯಲಾರದು ಎಂದರು.
ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಲು ಹೊರಡುವ ಮೂಲಕ ಬಿಹಾರದ ಜನರು ಅಭಿವೃದ್ಧಿ, ಉತ್ತಮ ಆಡಳಿತ ಮತ್ತು ಸ್ಥಿರತೆಗಾಗಿ ಡಬಲ್ ಇಂಜಿನ್ ಎನ್‌ಡಿಎ ಸರ್ಕಾರದ ಮೇಲೆ ನಿರಂತರ ನಂಬಿಕೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ರಾಷ್ಟ್ರೀಯ ಹಿತಾಸಕ್ತಿ ಮತ್ತು ಅಭಿವೃದ್ಧಿಯ ನೀತಿಗಳು ಬಲವಾದ ಸಾರ್ವಜನಿಕ ಬೆಂಬಲವನ್ನು ಪಡೆಯುತ್ತಿವೆ ಎಂದು ಆದಿತ್ಯನಾಥ್ ಹೇಳಿದರು.