ಉತ್ತರಪ್ರದೇಶ: ಹಿಂದೂಗಳ ಪವಿತ್ರಕ್ಷೇತ್ರ ಅಯೋಧ್ಯೆಯ ರಾಮ ಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರು ಸಂಜಯ್ ಗಾಂಧಿ ವೈದ್ಯಕೀಯ ವಿಜ್ಞಾನ ಸ್ನಾತಕೋತ್ತರ ಸಂಸ್ಥೆಯಲ್ಲಿ ಇಂದು ಬುಧವಾರ ನಿಧನರಾದರು.
1992ರ ಡಿಸೆಂಬರ್ 6ರಂದು ಬಾಬರಿ ಮಸೀದಿಯನ್ನು ಕೆಡವಿದ ಸಂದರ್ಭದಲ್ಲೂರಾಮ ಮಂದಿರದ ಅರ್ಚಕರಾಗಿ ಸೇವೆ ಸಲ್ಲಿಸಿದ್ದ ಅವರು ಪಾರ್ಶ್ವವಾಯುವಿನಿಂದ ಬಳಲುತ್ತಿದ್ದರು. 85 ವರ್ಷದ ಅವರನ್ನು ಎಸ್‌ಜಿಪಿಜಿಐ ಆಸ್ಪತ್ರೆಗೆ ಇದೇ 3ರಂದು ದಾಖಲಿಸಲಾಗಿತ್ತು. ಅವರು ಅಯೋಧ್ಯೆಯ ಪ್ರಮುಖ ಸಂತರಲ್ಲಿ ಒಬ್ಬರಾಗಿದ್ದರು.
ಆಚಾರ್ಯ ಸತ್ಯೇಂದ್ರ ದಾಸ್ ಅವರ ನಿಧನಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ. ಶ್ರೀರಾಮನ ಪರಮ ಭಕ್ತ, ಅಯೋಧ್ಯಯ ರಾಮ ಜನ್ಮಭೂಮಿ ದೇವಸ್ಥಾನದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ಕುಮಾರ್ ದಾಸ್ ಜಿ ಮಹಾರಾಜ್ ಅವರ ನಿಧನವು ಅತ್ಯಂತ ದುಃಖಕರ ಮತ್ತು ಆಧ್ಯಾತ್ಮಿಕ ಜಗತ್ತಿಗೆ ತುಂಬಲಾರದ ನಷ್ಟವಾಗಿದೆ ಎಂದು ಯೋಗಿ ಕಂಬನಿ ಮಿಡಿದಿದ್ದಾರೆ.
ವಿಶ್ವ ಹಿಂದೂ ಪರಿಷತ್ತಿನ ವಕ್ತಾರ ಶರದ್ ಶರ್ಮಾ ದಾಸ್ ಅವರೂ ಸಂತಾಪ ಸೂಚಿಸಿದ್ದು, ಸತ್ಯೇಂದ್ರ ದಾಸ್ ಅವರು ಗೌರವಾನ್ವಿತ ವ್ಯಕ್ತಿಯಾಗಿದ್ದರು. ಅಯೋಧ್ಯೆ ಚಳವಳಿಯ ಇತಿಹಾಸವನ್ನು ಹೃದಯದಿಂದ ತಿಳಿದವರಲ್ಲಿ ಒಬ್ಬರು. ಅವರ ಸಾವಿಗೆ ನಾವು ಸಂತಾಪ ಸೂಚಿಸುತ್ತೇವೆ ಎಂದು ಹೇಳಿದ್ದಾರೆ.