ನಾಗ್ಪುರ: ಪಾನಿಪೂರಿ ಪ್ರಿಯರಿಗೆ ಸಿಹಿ ಸುದ್ದಿ. ಇಲ್ಲಿ 99,000 ರೂ. ಕೊಟ್ಟರೆ ಲೈಫ್ ಟೈಮ್ ಪಾನಿಪುರಿ ಫ್ರೀ ಆಗಿ ಸಿಗಲಿದೆ. ಈ ವಿಚಾರ ಈಗ ವೈರಲ್ ಆಗಿದೆ.
ಪಾನಿಪುರಿ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಅದರಲ್ಲೂ ಬೀದಿ ಬದಿ ಖಾರ ಖಾರವಾಗಿ ಸಿಗುವ ಪಾನಿಪುರಿ ಚಪ್ಪರಿಸಿಕೊಂಡು ತಿನ್ನಲು ಎಲ್ಲರೂ ಇಷ್ಟಪಡುತ್ತಾರೆ. ಅಂತಹ ಪಾನಿಪುರಿ ಪ್ರಿಯರನ್ನು ಗಮನದಲ್ಲಿಟ್ಟುಕೊಂಡೇ ಈ ವ್ಯಾಪಾರಿ ಭರ್ಜರಿ ಆಫರ್ ನೀಡಿದ್ದಾನೆ.
ನಾಗ್ಪುರದ ಗೋಲ್ ಗಪ್ಪಾ ವ್ಯಾಪಾರಿಯೊಬ್ಬ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದ್ದಾನೆ. ನೀವು ಒಮ್ಮೆ 99,000 ರೂ. ಪಾವತಿಸಿದರೆ ಸಾಕು. ನಿಮ್ಮ ಜೀವಮಾನವಿಡೀ ಈತನ ಅಂಗಡಿಯಲ್ಲಿ ಉಚಿತವಾಗಿ ನಿಮಗೆ ಮನದಣಿಯುವಷ್ಟು ಪಾನಿಪುರಿ ಸೇವನೆ ಮಾಡಬಹುದಾಗಿದೆ.
ಗ್ರಾಹಕರನ್ನು ಒಲಿಸಿಕೊಳ್ಳುವುದು ಒಂದು ಕಲೆ. ಈ ವ್ಯಾಪಾರಿ ಅದನ್ನು ಯಶಸ್ವಿಯಾಗಿ ಮಾಡುತ್ತಾನೆ. ಈತನ ಆಫರ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ವೈರಲ್ ಆಗಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನೀವು ಒಂದೇ ಕಡೆ ಅಷ್ಟು ಸಮಯ ಇದ್ದರೆ ಸರಿ. ಜೀವಮಾನವಿಡೀ ಗೋಲ್ ಗಪ್ಪಾ ಸೇವಿಸಲು ನಿಮಗೆ ಸಾಧ್ಯವಾದರೆ ಸರಿ. ಇಲ್ಲದೇ ಹೋದರೆ ಇದು ವೇಸ್ಟ್ ಅಲ್ವಾ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಅದೇನೇ ಇರಲಿ, ಇಂತಹದ್ದೊಂದು ವಿನೂತನ ಆಫರ್ ನೀಡಿರುವುದನ್ನು ನೋಡಲಾದರೂ ಕೆಲವು ಗ್ರಾಹಕರು ಈತನ ಬಳಿಗೆ ಬರಬಹುದು. ಇದರಿಂದ ತನ್ನ ವ್ಯಾಪಾರವೂ ಹೆಚ್ಚಾಗಬಹುದು ಎಂಬುದು ಆತನ ಲೆಕ್ಕಾಚಾರ.