ಬೆಂಗಳೂರು: ಇಂದು ದೇಶದ ಪ್ರಥಮ ಪ್ರಧಾನಿ ಜವಹರಲಾಲ್ ನೆಹರೂ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿರುವ ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನೆಹರೂ ದೇಶಕ್ಕೆ ನೀಡಿರುವ ಕೊಡುಗೆಗಳನ್ನು ಸ್ಮರಿಸಿದ ಅವರು ಬಿಜೆಪಿ ಮೇಲೆ ಹರಿಹಾಯ್ದಿದ್ದಾರೆ. ಬಿಜೆಪಿಗೆ ಮಹಾತ್ಮ ಗಾಂಧಿ ಹಾಗೂ ಜವಾಹರಲಾಲ್ ನೆಹರೂ ಅವರನ್ನು ತೆಗಳುವುದೇ ಕೆಲಸ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿಯ ಪಾತ್ರವೇ ಇಲ್ಲ. ಮಹಾತ್ಮ ಗಾಂಧಿ, ನೆಹರೂ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು. ಅವರನ್ನು ತೆಗಳಿ, ಇಲ್ಲದ ಆರೋಪಗಳನ್ನು ಹೊರಿಸುವುದೇ ಅವರ ಕೆಲಸ. ನರೇಂದ್ರ ಮೋದಿ, ಬಿಜೆಪಿ, ಆರ್.ಎಸ್.ಎಸ್ ಗಾಂಧಿ ಮತ್ತು ನೆಹರೂ ಅವರನ್ನು ಹೀಯಾಳಿಸುವುದನ್ನೇ ಉದ್ಯೋಗ ಮಾಡಿಕೊಂಡಿದ್ದಾರೆ ಎಂದಿದ್ದಾರೆ.
ಅವರು ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ದೇಶ ಪ್ರೇಮ ಹಾಗೂ ಸ್ವಾತಂತ್ರ್ಯ ಪ್ರೇಮಗಳನ್ನು ಬೆಳೆಸಿಕೊಂಡಿದ್ದರು. ಬ್ರಿಟಿಷರ ವಿರುದ್ಧ ಹೋರಾಡುವ ಮನೋಭಾವ ಬೆಳೆಸಿಕೊಂಡು ಮಹಾತ್ಮ ಗಾಂಧಿಯವರ ನೆಚ್ಚಿನ ಶಿಷ್ಯರಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುತ್ತಾರೆ. ಸುಮಾರು 9 ವರ್ಷಗಳ ಕಾಲ ಕಾರಾಗೃಹದಲ್ಲಿದ್ದು ದೇಶಕ್ಕಾಗಿ ಬಹಳಷ್ಟು ತ್ಯಾಗ ಬಲಿದಾನಗಳನ್ನು ಮಾಡಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಲಭಿಸಿದಾಗ ದೇಶದ ಬಜೆಟ್ ಗಾತ್ರ 197 ಕೋಟಿ ರೂ. ಗಳು ಮಾತ್ರ ಇತ್ತು.
ಎರಡು ಮೂರು ವರ್ಷಗಳ ನಂತರ 4 ಅಂಕಿಗಳ ಹಂತಕ್ಕೆ ತಲುಪಿತು. ಕೃಷಿ, ನೀರಾವರಿ, ಕೈಗಾರಿಕೆಗಳಲ್ಲಿ ಆಸಕ್ತಿ ಹೊಂದಿದ್ದ ನೆಹರೂ ಅವರು ದೇಶವನ್ನು ವೈಜ್ಞಾನಿಕವಾಗಿ, ವೈಚಾರಿಕವಾಗಿ ಬೆಳೆಸುವ ಪ್ರಯತ್ನ ಮಾಡಿದರು. ಪಂಚ ವಾರ್ಷಿಕ ಯೋಜನೆಗಳ ಮೂಲಕ ದೇಶ ಕಟ್ಟುವ ಕೆಲಸವನ್ನು ಮಾಡಿದರು ಎಂದು ಹೊಗಳಿದ್ದಾರೆ.