ನವದೆಹಲಿ: ಏರ್‌ಪೋರ್ಟ್‌ನಲ್ಲಿ ನಮಾಜ್ ವಿಚಾರವಾಗಿ ಹಿಂದೂ ವಿರೋಧಿ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದ ಮಾಜಿ ಸಚಿವ ಆಂಜನೇಯ ಅವರು ಈ ಸಂಬಂಧ ಪ್ರತಿಕ್ರಿಯಿಸಿ, ನಾನು ಮಾತನಾಡಿದ್ದೇನೆ. ನಾನು ಯಾರ ಭಾವನೆಯನ್ನೂ ಕೆರಳಿಸಿಲ್ಲ ಎಂದು ಸ್ಪಷ್ಟನೆ ನೀಡಿದರು.
ಏರ್ ಪೋರ್ಟ್ ನಲ್ಲಿ ನಮಾಜ್ ಮಾಡಿರುವ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ, "ನಾನು ಇದರ ಬಗ್ಗೆ ವಿವಾದಾತ್ಮಕವಾದ ಹೇಳಿಕೆಯನ್ನೇ ಕೊಟ್ಟಿಲ್ಲ. ಜಾಗ ಇದ್ದ ಕಡೆ ಮನಸ್ಸಿನ ನೆಮ್ಮದಿಗಾಗಿ ದೇಶದ ಒಳಿತಿಗಾಗಿ ಪ್ರಾರ್ಥನರ ಮಾಡಿರಬಹುದು. ಈ ಹಿಂದೆ ಋಷಿ ಮುನಿಗಳು ಎಲ್ಲರ ಒಳಿತಿಗೆ ಪ್ರಾರ್ಥನೆ ಮಾಡುತ್ತಿದ್ದರು. ಅವರ ಪ್ರಾರ್ಥನೆಯಿಂದ ಯಾರಿಗಾದರೂ ತೊಂದರೆಯಾಗಿದೆಯೇ? ಇದೇ ವಿಚಾರಗಳನ್ನು ನಾನು ಹೇಳಿದ್ದು. ನಮ್ಮವರೇ ಅಂದರೆ ಅಸ್ಪೃಶ್ಯ, ಬಡ ವರ್ಗಕ್ಕೆ ಸೇರಿದವರು ನಾಮ ಹಾಕಿಕೊಂಡು ತಟ್ಟೆ ಹಿಡಿದುಕೊಂಡು ಟ್ರಾಫಿಕ್ ಸಿಗ್ನಲ್ ಗಳಲ್ಲಿ ದೇವರ ಹೆಸರಿನಲ್ಲಿ ಬಿಕ್ಷೆ ಬೇಡುತ್ತಾ ಇರುತ್ತಾರೆ" ಎಂದರು.
"ನಮ್ಮ ಧರ್ಮ, ದೇವರು ಆಚರಣೆಗಳನ್ನು ಅವರುಗಳು ವಿರೋಧ ಮಾಡಬಾರದು. ಆ ಧರ್ಮದವರು ಪ್ರಾರ್ಥನೆ ಮಾಡುವಾಗ ನಾವು ಕೂಡ ವಿರೋಧ ಮಾಡಬಾರದು. ಈ ದೃಷ್ಟಿಕೋನದಲ್ಲಿ ನಾನು ಮಾತನಾಡಿದ್ದೇನೆ. ನಾನು ಯಾರ ಭಾವನೆಯನ್ನೂ ಕೆರಳಿಸಿಲ್ಲ. ವಿವಾದಾತ್ಮಕ ಎಂದು ಕೊಂಡರೆ ಅದು ಅವರುಗಳ ಸೃಷ್ಟಿ" ಎಂದರು.
"ಅರ್ಚಕರಿಗೆ, ಪೂಜಾರಿಗಳಿಗೆ ಅವಮಾನ ಮಾಡಲಾಗಿದೆ ಎಂದು ಬಿಂಬಿಸಲಾಗಿದೆ. ನಾನು ಯಾವ ಹೆಸರನ್ನೂ ತೆಗೆದುಕೊಂಡಿಲ್ಲ. ಆದರೂ ಬೇಕಂತಲೇ ವಿವಾದ ಮಾಡಲಾಗಿದೆ" ಎಂದರು.