ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಖೈದಿಗಳ ಐಷಾರಾಮಿ ಜೀವನಶೈಲಿ ಬಗ್ಗೆ ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯಗೆ ದರ್ಶನ್ ವಿಚಾರದಲ್ಲಿ ಇದ್ದ ಅರ್ಜೆಂಟ್ ಈಗ್ಯಾಕಿಲ್ಲ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಉಗ್ರರು, ರೌಡಿ ಶೀಟರ್ ಗಳು ಬಿಂದಾಸ್ ಆಗಿ ಮೊಬೈಲ್ ಬಳಸುವುದು, ಎಣ್ಣೆ ಪಾರ್ಟಿ ಮಾಡುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು. ಇದನ್ನು ನೋಡಿ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಈ ವಿಚಾರ ಸರ್ಕಾರಕ್ಕೆ ಈಗ ಮುಜುಗರ ತಂದಿದೆ. ಇದಕ್ಕೆ ಸ್ಪಷ್ಟನೆ ನೀಡಿರುವ ಸಿಎಂ ಸಿದ್ದರಾಮಯ್ಯ ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ಐಷಾರಾಮಿ ಸವಲತ್ತುಗಳು ದೊರಕುತ್ತಿರುವ ವಿಷಯ ನಮ್ಮ ಸರ್ಕಾರದ ಗಮನಕ್ಕೆ ಬಂದಿದೆ. ಸಂಬಂಧಪಟ್ಟ ಅಧಿಕಾರಿಗಳು ರಜೆಯ ಮೇಲೆ ತೆರಳಿದ್ದರು. ನಾಳೆ ಗೃಹ ಸಚಿವರು ಈ ಬಗ್ಗೆ ಸಭೆ ಕರೆದಿದ್ದಾರೆ. ತಪ್ಪು ಮಾಡಿದವರ ಮೇಲೆ ಗಂಭೀರ ಕ್ರಮ ಕೈಗೊಳ್ಳಲಾಗುವುದು ಹಾಗೂ ಇನ್ನೂ ಮುಂದೆ ಇಂಥದ್ದು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದು ಎಂದಿದ್ದಾರೆ.
ಆದರೆ ಜೈಲಿನ ಅವ್ಯವಸ್ಥೆಗೆ ಅಧಿಕಾರಿಗಳ ರಜೆ ನೆಪ ಹೇಳಿರುವುದಕ್ಕೆ ನೆಟ್ಟಿಗರು ಗರಂ ಆಗಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ರಜೆ ಮೇಲಿದ್ದರೆ ಉಳಿದ ಅಧಿಕಾರಿಗಳು ಏನು ಮಾಡುತ್ತಿದ್ದರು? ಎಂದು ಪ್ರಶ್ನೆ ಮಾಡಿದ್ದಾರೆ. ನಿಮಗೆ ಎಲ್ಲಾ ಆದ ಮೇಲೇನೇ ಗೊತ್ತಾಗೋದು ಎಂದು ಇನ್ನೊಬ್ಬರು ತರಾಟೆಗೆ ತೆಗೆದುಕೊಂಡಿದ್ದಾರೆ. ಮತ್ತೊಬ್ಬರು ದರ್ಶನ್ ವಿಚಾರದಲ್ಲಿ ತಕ್ಷಣವೇ ಕೋರ್ಟ್ ಗೆ ಹೋಗಿ ಅರ್ಜೆಂಟ್ ಮಾಡಿದ್ದ ನಿಮಗೆ ಈಗ ಈ ವಿಚಾರದಲ್ಲಿ ಅರ್ಜೆಂಟ್ ಇಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ.