ಕೂಡ್ಲಿಗಿ: ತುಂಗಭದ್ರಾ ನೀರನ್ನು ಆಶ್ರಯಿಸಿರುವ ರೈತರು ಎರಡನೇ ಬೆಳೆ ವಿಚಾರದಲ್ಲಿ ರಾಜಕೀಯ ಮಾಡುವುದು ಒಳ್ಳೆಯದಲ್ಲ. ಅಣೆಕಟ್ಟೆ ಮುಖ್ಯನೋ, ಬೆಳೆ ಮುಖ್ಯನೋ ವಿಚಾರ ಮಾಡಬೇಕೆಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಅವರು ಇಂದು 74 ಕೆರೆ ತುಂಬಿಸುವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ರೈತರ ಹಿತದೃಷ್ಟಿಯಿಂದ ತುಂಗಭದ್ರಾ ಅಣೆಕಟ್ಟೆಗೆ ಹೊಸ ಗೇಟ್ ಅಳವಡಿಸಲಾಗುತ್ತದೆ, ಇದಕ್ಕೆ ಸಹಕಾರ ನೀಡಬೇಕೆಂದರು.
ಶ್ರೀನಿವಾಸ್ ಅವರ ಜತೆಗಿದ್ದೇವೆಂದು ಇಡೀ ಸರ್ಕಾರ ಇಲ್ಲಿಗೆ ಬಂದು ತೋರಿಸಿಕೊಟ್ಟಿದೆ. ಟೀಕೆಗಳನ್ನು ಮರೆಯಬೇಕು,ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಇದೇ ನಮ್ಮ ಸರಕಾರದ ಕಲ್ಪನೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತನ್ನು ಪುನರುಚ್ವರಿಸಿದರು.
ಬಿಜೆಪಿಗೆ ಕಾಲೆಳೆದ ಡಿಕೆಶಿ: ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿ ಇದ್ದರೆ ಚೆಂದ. ದಾನ ಧರ್ಮ ಕೈ ಅಧಿಕಾರದಲ್ಲಿ ಇದ್ದರೆ ಚೆಂದ. ಹಸ್ತ ವಿರೋಧ ಪಕ್ಷದವರ ಬಾಯನ್ನು ಮುಚ್ಚಿದೆ, ಬೆಲೆ ಏರಿಕೆ ನಿಯಂತ್ರಣ ಮಾಡಿದೆ. ಈ ಹಸ್ತ ಐದು ಗ್ಯಾರಂಟಿ ಕೊಟ್ಟಿದೆ. ಈ ಹಸ್ತ ಗ್ಯಾರಂಟಿ ಮೂಲಕ ಕೈ ಗಟ್ಟಿ ಮಾಡಿದೆ. ಗ್ಯಾರಂಟಿ ಮೂಲಕ ಒಂದು ಲಕ್ಷ ಕೋಟಿ ಮನೆಗೆ ಕೊಟ್ಟಿದ್ದೇವೆ. ಈ ಎಲ್ಲ ಕಾರ್ಯಗಳನ್ನು ಬಿಜೆಪಿಯವರು ಯಾವಾ ಕಾಲಕ್ಕೂ ಮಾಡಕ್ಕೆ ಸಾಧ್ಯವಿಲ್ಲ ಎಂದರು.