ಬೆಂಗಳೂರು: ರಾಮನಗರದಲ್ಲಿ ಆಹಾರ ಅರಸಿ ಬಂದ ಕಾಡಾನೆಗಳು ಹಾರೋಬೆಲೆ ಡ್ಯಾಂನಲ್ಲಿ ಮುಳುಗಿ ಸಾವುಡ್ಯಾಂ ಹಿನ್ನೀರಿನಲ್ಲಿ ಮುಳುಗಿ 2 ಕಾಡಾನೆಗಳು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.
ಈ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ತಾಲೂಕಿನ ಸಾತನೂರು ಅರಣ್ಯ ವ್ಯಾಪ್ತಿಯ ಕೂನೂರು ಗ್ರಾಮದ ಬಳಿಯ ಅರ್ಕಾವತಿ ನದಿಯ ಹಾರೋಬೆಲೆ ಡ್ಯಾಂ ಹಿನ್ನೀರಿನಲ್ಲಿ ನಡೆದಿದೆ.
ಆಹಾರ ಅರಸಿ ನಾಡಿಗೆ ಬಂದಿದ್ದ ವೇಳೆ ಗಂಡಾನೆಗಳು ನದಿ ದಾಟುವಾಗ ಜೊಂಡಿಗೆ ಸಿಲುಕಿ ಮುಳುಗಿ ಮೃತಪಟ್ಟಿವೆ.
ಇನ್ನೂ ಸ್ಥಳೀಯ ನಿವಾಸಿಗಳ ಪ್ರಕಾರ, ಕಳೆದೊಂದು ವಾರದಿಂದ ಗ್ರಾಮದ ಸುತ್ತಮುತ್ತ ಏಳು ಗಂಡಾನೆಗಳು ಕಾಣಿಸಿಕೊಂಡಿದ್ದವು. ಹೀಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಅವುಗಳನ್ನು ಕಾಡಿಗೆ ಹಿಮ್ಮೆಟ್ಟಿಸುವ ಕೆಲಸ ಮಾಡಿದ್ದರು.
ಈ ವೇಳೆ ಹದಿನೈದರಿಂದ ಇಪತ್ತು ವರ್ಷ ವಯಸ್ಸಿನ ಎರಡು ಗಂಡಾನೆಗಳು ನದಿ ದಾಟಲು ಹೋಗಿ ಜೊಂಡು (ಜಲಸಸ್ಯ) ಸಿಲುಕಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿವೆ ಎಂದು ತಿಳಿದುಬಂದಿದೆ.
ಸಾವನ್ನಪ್ಪಿರುವ ಕಾಡಾನೆಗಳನ್ನು ಸಿಬ್ಬಂದಿ ನದಿಯಿಂದ ಹೊರಕ್ಕೆ ತಂದಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಮರಣೋತ್ತರ ಪರೀಕ್ಷೆ ಬಳಿಕ ಅಂತ್ಯಸಂಸ್ಕಾರ ನಡೆಸಲಿದ್ದಾರೆ. ಸದ್ಯ ಸ್ಥಳದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ.