ಬೆಂಗಳೂರು: ಆರ್ ಎಸ್ಎಸ್ ಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆಗಳ ಸುರಿಮಳೆಗೈದ ಸಚಿವ ಪ್ರಿಯಾಂಕ್ ಖರ್ಗೆಯನ್ನು ನೆಟ್ಟಿಗರು ಮತ್ತೆ ಟ್ರೋಲ್ ಮಾಡಿದ್ದಾರೆ.
ನಿನ್ನೆ ಬೆಂಗಳೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸಂಘದ ಬಗ್ಗೆ ಇತ್ತೀಚೆಗೆ ಪ್ರಿಯಾಂಕ್ ಖರ್ಗೆ ಸೇರಿದಂತೆ ಕರ್ನಾಟಕದ ಕಾಂಗ್ರೆಸ್ ನಾಯಕರು ಎತ್ತುತ್ತಿರುವ ಪ್ರಶ್ನೆಗಳಿಗೆ ಉತ್ತರ ನೀಡಿದ್ದರು. ಆರ್ ಎಸ್ಎಸ್ ಸ್ಥಾಪನೆಯಾದಾಗ ಬ್ರಿಟಿಷ್ ಸರ್ಕಾರವಿತ್ತು. ಹಾಗಿದ್ದರೆ ಬ್ರಿಟಿಷರ ಬಳಿ ನೊಂದಾಯಿಸಬೇಕಿತ್ತಾ ಎಂದಿದ್ದರು. ಇನ್ನು, ಸಂಘಕ್ಕೆ ನಾವು ಹೊರಗಿನವರಿಂದ ಡೊನೇಷನ್ ಕೇಳುತ್ತಿಲ್ಲ. ಸಂಘಕ್ಕೆ ಯಾವುದೇ ಧರ್ಮದವರೂ ಸೇರ್ಪಡೆಯಾಗಬಹುದು ಎಂದು ಪ್ರಿಯಾಂಕ್ ಖರ್ಗೆ ಆರೋಪಗಳಿಗೆ ಉತ್ತರ ನೀಡಿದ್ದರು.
ಇದಕ್ಕೆ ಪ್ರಿಯಾಂಕ್ ಖರ್ಗೆ ಮತ್ತೆ ಎಕ್ಸ್ ಪುಟದಲ್ಲಿ ಆರ್ ಎಸ್ಎಸ್ ಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಡೊನೇಷನ್ ನಲ್ಲಿ ಪಾರದರ್ಶಕತೆಯಿದ್ದರೆ ಯಾಕೆ ನೇರವಾಗಿ ಮಾಡುವುದಿಲ್ಲ? ಆರ್ ಎಸ್ಎಸ್ ಸ್ವಯಂ ಸೇವಕರು ಯಾರು, ಅವರನ್ನು ಹೇಗೆ ನೇಮಿಸುತ್ತೀರಿ ಎಂಬಿತ್ಯಾದಿ ಹಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
ಇದಕ್ಕೆ ನೆಟ್ಟಿಗರು ಸಾಕಷ್ಟು ಸಂಖ್ಯೆಯಲ್ಲಿ ಕಾಮೆಂಟ್ ಮಾಡಿದ್ದಾರೆ. ಒಬ್ಬರಂತೂ ಈ ಮಟ್ಟಿಗೆ ನಿಮ್ಮ ಐಟಿ-ಬಿಟಿ ಇಲಾಖೆಯಲ್ಲಿ ರಿಸರ್ಚ್ ಮಾಡಿದ್ದರೆ ಇಷ್ಟೊತ್ತಿಗೆ ರಾಜ್ಯ ಎಷ್ಟೋ ಅಭಿವೃದ್ಧಿಯಾಗುತ್ತಿತ್ತು ಎಂದಿದ್ದಾರೆ. ಮತ್ತೆ ಕೆಲವರು ನಿಮ್ಮ ಪಕ್ಷಕ್ಕೆ ಬರುವ ದೇಣಿಗೆ ಬಗ್ಗೆಯೂ ಪಾರದರ್ಶಕವಾಗಿ ಹೇಳುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಇಷ್ಟಕ್ಕೂ ಇದನ್ನೆಲ್ಲಾ ಟ್ವೀಟ್ ಮಾಡುವ ಬದಲು ಕೋರ್ಟ್ ಗೆ ಹೋಗಿ ಪ್ರಶ್ನೆ ಮಾಡಬಹುದಲ್ವೇ ಎಂದು ಪ್ರಶ್ನೆ ಮಾಡಿದ್ದಾರೆ.