ಬೆಂಗಳೂರು: ರಾಹುಲ್ ಗಾಂಧಿ ನೇತೃತ್ವದಲ್ಲಿ ಲೋಕಸಭೆಯಲ್ಲಿ ವೋಟ್ ಕಳ್ಳತನದ ಕುರಿತು ಕಾಂಗ್ರೆಸ್ ನಡೆಸಿದ ಅಭಿಯಾನದ ಭಾಗವಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹಮ್ಮಿಕೊಂಡ ಸಹಿ ಸಂಗ್ರಹ ಅಭಿಯಾನ ಪೂರ್ಣಗೊಂಡಿದೆ. ರಾಜ್ಯದಲ್ಲಿ ಬರೋಬ್ಬರಿ 1.12 ಕೋಟಿ ಸಹಿ ಸಂಗ್ರಹ ಮಾಡಲಾಗಿದ್ದು, ನಾಳೆಯೇ ಹೈಕಮಾಂಡ್‌ಗೆ ಸಲ್ಲಿಸಲಿದೆ.
ದೇಶದ ಹಲವು ರಾಜ್ಯಗಳಲ್ಲಿ ಮತಗಳ್ಳತನ ನಡೆದಿದ್ದು, ಅದರ ವಿರುದ್ಧ ಜನಜಾಗೃತಿ ಮಾಡುವ ಉದ್ದೇಶದೊಂದಿಗೆ ರಾಜ್ಯದಲ್ಲಿ ಈ ವರೆಗೆ 1.12 ಕೋಟಿ ಜನರಿಂದ ಕಾಂಗ್ರೆಸ್ ಸಹಿ ಸಂಗ್ರಹ ಮಾಡಿದ್ದು. ಸೋಮವಾರ ನವದೆಹಲಿಯ ಎಐಸಿಸಿ ಕಚೇರಿಗೆ ಸಲ್ಲಿಕೆ ಮಾಡಲಿದೆ.
ವೋಟ್ ಚೋರಿ ವಿರುದ್ಧದ ಸಹಿ ಅಭಿಯಾನದ ಭಾಗವಾಗಿ ಕರ್ನಾಟಕದಿಂದ ಪಕ್ಷವು 1.12 ಕೋಟಿ ಸಹಿಗಳನ್ನು ಸಂಗ್ರಹಿಸಿದೆ. ಈ ಸಹಿಗಳನ್ನು ನ.10 ರಂದು ಹೈಕಮಾಂಡ್‌ಗೆ ಸಲ್ಲಿಸಲಿದ್ದು, ಅಲ್ಲಿಂದ ರಾಷ್ಟ್ರಪತಿ ಮತ್ತು ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ರಾಜ್ಯದ ಹಲವು ಜಿಲ್ಲೆಗಳಿಂದ ನಾವು ಸಹಿ ಸಂಗ್ರಹಿಸಿದ್ದೇವೆ. ಅಭಿಯಾನ ಯಶಸ್ವಿಯಾಗಿದೆ. 1,12,40,000 ಸಹಿಗಳನ್ನು ಸಂಗ್ರಹಿಸಿದ್ದೇವೆ.ನವೆಂಬರ್ 10 ರಂದು ಹೈಕಮಾಂಡ್'ಗೆ ಸಲ್ಲಿಸಲು ನಾವು ನಿರ್ಧರಿಸಿದ್ದೇವೆ. ನವೆಂಬರ್ 25 ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ರ್ಯಾಲಿಯನ್ನು ಯೋಜಿಸಲಾಗಿದೆ ಎಂದು ತಿಳಿಸಿದರು.
ನಾವು ಮತ ಚೋರಿಯನ್ನು ಬಹಿರಂಗಪಡಿಸಿದ ನಂತರ ಇಸಿಐ ವಿಶೇಷ ತೀವ್ರ ಪರಿಷ್ಕರಣೆಯನ್ನೇಕೆ ಕೈಗೆತ್ತಿಕೊಂಡಿತು? ಹೀಗಾಗಿಯೇ ನಾವು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಬ್ಯಾಲೆಟ್ ಪೇಪರ್‌ಗಳನ್ನು ಬಳಸಲು ನಾವು ನಿರ್ಧರಿಸಿದ್ದೇವೆ ಎಂದರು.