ತ್ರಿಶ್ಶೂರ್: ಕೇರಳದ ಪ್ರಸಿದ್ಧ ತ್ರಿಶ್ಶೂರ್ ಪೂರಂನಲ್ಲಿ ದೇವರ ಆನೆ ರೊಚ್ಚಿಗೆದ್ದು ಜನರ ಮೇಲೆಯೇ ದಾಳಿ ನಡೆಸಿದ ವಿಡಿಯೋ ವೈರಲ್ ಆಗಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ.
ಕೇರಳ ತ್ರಿಶ್ಶೂರ್ ನಲ್ಲಿ ಪ್ರತೀ ವರ್ಷವೂ ನಡೆಯುವ ವಾರ್ಷಿಕ ಜಾತ್ರೆಗೆ ಅದರದ್ದೇ ಆದ ಇತಿಹಾಸವಿದೆ. ಸಾಕಷ್ಟು ಜನ ಇಲ್ಲಿ ಸೇರುತ್ತಾರೆ. ಸಿಡಿಮದ್ದಿನ ಪ್ರದರ್ಶನ, ಆನೆಗಳನ್ನು ಸಾಂಪ್ರದಾಯಿಕವಾಗಿ ಅಲಂಕರಿಸಿ ಚೆಂಡೆಮೇಳದ ಜೊತೆ ಜಾತ್ರೆ ನೋಡುವುದೇ ಒಂದು ಹಬ್ಬ.
ಇದೀಗ ಕೇರಳದ ತ್ರಿಶ್ಶೂರ್ ಪೂರಂ ನಡೆಯುತ್ತಿದ್ದು ನಿನ್ನೆ ಜನರ ನಡುವೆ ರೊಚ್ಚಿಗೆದ್ದ ಆನೆ ದಾಳಿ ನಡೆಸಿದೆ. ಆಭರಣ ಹೊತ್ತ ಆನೆ ರೊಚ್ಚಿಗೆದ್ದು ಓಡಿದ್ದು ಜನರು ಗಾಬರಿಗೊಂಡು ಯದ್ವಾ ತದ್ವಾ ಓಡಿದ್ದಾರೆ.
ಇದರಿಂದಾಗಿ ಹಲವರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆನೆ ಓಡುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಈಗ ವೈರಲ್ ಆಗಿದೆ.