ಅಲಹಾಬಾದ್: ವಕೀಲರ ಉಡುಪು ಧರಸಿದೇ, ಶರ್ಟ್ ಬಟನ್ ಹಾಕದೆ ಬಂದ ವಕೀಲರೊಬ್ಬರಿಗೆ ಆರು ತಿಂಗಳು ಜೈಲು ಶಿಕ್ಷೆ ವಿಧಿಸಿದ ಘಟನೆ ಅಲಹಾಬಾದ್‌ನಲ್ಲಿ ನಡೆದಿದೆ.
2021ರ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟ್ ಸ್ಥಳೀಯ ವಕೀಲ ಅಶೋಕ್ ಪಾಂಡೆಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿ, ಆದೇಶ ಹೊರಡಿಸಿದೆ. ಅಶೋಕ್ ಪಾಂಡೆ ವಕೀಲರ ಉಡುಪು ಧರಿಸದೆ, ಬಟನ್ ಹಾಕದೆ ನ್ಯಾಯಾಲಯಕ್ಕೆ ಹಾಜರಾದ ಘಟನೆಯಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಗುರುವಾರ ತೀರ್ಪು ನೀಡಿದ ನ್ಯಾಯಮೂರ್ತಿಗಳಾದ ವಿವೇಕ್ ಚೌಧರಿ ಮತ್ತು ಬಿ.ಆರ್. ಸಿಂಗ್ ಅವರ ವಿಭಾಗೀಯ ಪೀಠವು, ಅಪರಾಧದ ಗಂಭೀರತೆ, ಪಾಂಡೆ ಅವರ ಹಿಂದಿನ ನಡವಳಿಕೆ ಮತ್ತು ಕಾನೂನು ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ನಿರಾಕರಿಸಿದ ಕಾರಣ "ಅನುಕರಣೀಯ ಶಿಕ್ಷೆ ಅಗತ್ಯ" ಎಂದು ಹೇಳಿದೆ.
ವಕೀಲರಿಗೆ ₹2,000ದಂಡವನ್ನೂ ವಿಧಿಸಲಾಯಿತು. ದಂಡವನ್ನು ಪಾವತಿಸದಿದ್ದಲ್ಲಿ ಅವರಿಗೆ ಹೆಚ್ಚುವರಿಯಾಗಿ ಒಂದು ತಿಂಗಳು ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಪಾಂಡೆ ಅವರಿಗೆ ಲಕ್ನೋದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ಶರಣಾಗಲು ನಾಲ್ಕು ವಾರಗಳ ಕಾಲಾವಕಾಶ ನೀಡಲಾಗಿದೆ.