ನವದೆಹಲಿ: ಏರ್ ಇಂಡಿಯಾ ಎಕ್ಸ್‌ಪ್ರೆಸ್ ಲ್ಯಾಂಡ್ ಮಾಡಿದ ಕೆಲವೇ ನಿಮಿಷದಲ್ಲೇ ಹೃದಯಾಘಾತಕ್ಕೆ ಒಳಗಾಗಿ 30 ವರ್ಷದ ಪೈಲೆಟ್ ಸಾವನ್ನಪ್ಪಿದ ಘಟನೆ ದೆಹಲಿಯಲ್ಲಿ ನಡೆದಿದೆ.
ಶ್ರೀನಗರದಿಂದ ದೆಹಲಿಗೆ ವಿಮಾನ ಹಾರಿಸಿದ್ದ ಪೈಲಟ್ ದೆಹಲಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡುತ್ತಿದ್ದ ವೇಳೆಯೇ ಅಸ್ವಸ್ಥರಾದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ, ಅವರು ಆಗಲೇ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದರು.
ಆರೋಗ್ಯ ಸ್ಥಿತಿಯಿಂದಾಗಿ ಅಮೂಲ್ಯ ಸಹೋದ್ಯೋಗಿಯ ನಷ್ಟಕ್ಕೆ ನಾವು ತೀವ್ರವಾಗಿ ವಿಷಾದಿಸುತ್ತೇವೆ. ಈ ಅಪಾರ ನಷ್ಟವನ್ನು ನಾವೆಲ್ಲರೂ ನಿಭಾಯಿಸುತ್ತಿರುವುದರಿಂದ ನಾವು ಅವರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತಿದ್ದೇವೆ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಕ್ತಾರರು ಗುರುವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಿಮಾನಯಾನ ಸಂಸ್ಥೆಯು ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಮತ್ತು ಊಹಾಪೋಹಗಳಿಂದ ದೂರವಿರಲು ಒತ್ತಾಯಿಸಿದೆ, ಈ ವಿಷಯದಲ್ಲಿ ಅಧಿಕಾರಿಗಳೊಂದಿಗೆ ಸಹಕರಿಸುತ್ತಿದೆ ಎಂದು ಹೇಳಿದೆ.