ನವದೆಹಲಿ: ಅಧಿವೇಶನ ನಡೆಯುತ್ತಿರುವಾಗ ತಂಗಿ, ಸಂಸದೆ ಪ್ರಿಯಾಂಕ ಗಾಂಧಿ ವಾದ್ರಾ ಕೆನ್ನೆ ಹಿಂಡಿದ ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ಸ್ಪೀಕರ್ ಓಂ ಬಿರ್ಲಾ ಕ್ಲಾಸ್ ತೆಗೆದುಕೊಂಡ ವಿಡಿಯೋ ಈಗ ವೈರಲ್ ಆಗಿದೆ.
ಪ್ರಿಯಾಂಕ ಗಾಂಧಿ ವಯನಾಡು ಸಂಸದೆ. ರಾಹುಲ್ ಗಾಂಧಿ ಲೋಕಸಭೆಯ ವಿಪಕ್ಷ ನಾಯಕ. ರಾಹುಲ್ ಹಿಂದಿನ ಸೀಟಿನಲ್ಲೇ ಪ್ರಿಯಾಂಕ ಸಂಸತ್ತಿನಲ್ಲಿ ಕೂರುತ್ತಾರೆ. ಸಂಸತ್ ಕಲಾಪ ನಡೆಯುತ್ತಿರುವಾಗ ಎದ್ದು ತಂಗಿಯ ಬಳಿ ಹೋದ ರಾಹುಲ್ ಕೆನ್ನೆ ಹಿಂಡಿ ಪ್ರಿಯಾಂಕರನ್ನು ಮಾತನಾಡಿಸುತ್ತಾರೆ.
ಇದು ಸ್ಪೀಕರ್ ಓಂ ಬಿರ್ಲಾ ಗಮನಕ್ಕೆ ಬರುತ್ತದೆ. ತಕ್ಷಣವೇ ಅವರು ರಾಹುಲ್ ವರ್ತನೆಯನ್ನು ಆಕ್ಷೇಪಿಸುತ್ತಾರೆ. ‘ಸದನಕ್ಕೆ ಅದರದ್ದೇ ಆದ ಮರ್ಯಾದೆಯಿದೆ. ಸದಸ್ಯರು ಸದನದ ಗೌರವವನ್ನು ಎತ್ತಿ ಹಿಡಿಯಬೇಕು ಎಂದು ಅಪೇಕ್ಷಿಸುತ್ತೇವೆ. ನಾನು ಹಲವು ಬಾರಿ ಹೇಳಿದರೂ ಸದಸ್ಯರ ಈ ರೀತಿಯ ವರ್ತನೆ ಸದನಕ್ಕೆ ಮಾಡುವ ಅವಮರ್ಯಾದೆಯಾಗಿದೆ’ ಎಂದು ಸ್ಪೀಕರ್ ಕ್ಲಾಸ್ ತೆಗೆದುಕೊಳ್ಳುತ್ತಾರೆ.
‘ಈ ಸದನದಲ್ಲಿ ತಂದೆ, ಮಗ, ಪತಿ-ಪತ್ನಿ ಎಂಬ ಯಾವ ಸಂಬಂಧವೂ ಲೆಕ್ಕಕ್ಕೆ ಬರುವುದಿಲ್ಲ. ನಿಯಮ 349 ರ ಪ್ರಕಾರ ಪ್ರತಿಯೊಬ್ಬ ಸದಸ್ಯರೂ ಸದನದ ಗೌರವಕ್ಕೆ ತಕ್ಕಂತೆ ನಡೆದುಕೊಳ್ಳುವುದು ಕರ್ತವ್ಯವಾಗಿದೆ. ವಿಶೇಷವಾಗಿ ಪ್ರತಿಪಕ್ಷಗಳು ಇದನ್ನು ಗಮನಿಸಬೇಕು’ ಎಂದು ಸ್ಪೀಕರ್ ರಾಹುಲ್ ರನ್ನು ಉದ್ದೇಶಿಸಿ ಎಚ್ಚರಿಕೆ ನೀಡಿದ್ದಾರೆ.