ನವದೆಹಲಿ: ಇದೇ ಮೊದಲ ಬಾರಿಗೆ ಸಂಸದೆಯಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಇಂದು ಪ್ರಮಾಣ ವಚನ ಸ್ವೀಕರಿಸಿದರು. ಇನ್ನು ಮುಂದೆ ಅಣ್ಣ ರಾಹುಲ್ ಗಾಂಧಿ ಜೊತೆ ಅವರೂ ಲೋಕಸಭೆಯಲ್ಲಿ ಉಪಸ್ಥಿತರಿರಲಿದ್ದಾರೆ.
ರಾಹುಲ್ ಗಾಂಧಿ ಲೋಕಸಭೆಯಲ್ಲಿ ವಿಪಕ್ಷ ನಾಯಕರಾಗಿದ್ದಾರೆ. ಮುಂದಿನ ದಿನಗಳಲ್ಲಿ ಈ ಅಣ್ಣ-ತಂಗಿ ಜೋಡಿ ಕಲಾಪದ ವೇಳೆ ಅಕ್ಕಪಕ್ಕ ಕುಳಿತುಕೊಳ್ಳಬಹುದೇ ಎಂಬ ಕುತೂಹಲ ಕೆಲವರಲ್ಲಿದೆ. ಅದಕ್ಕೆ ಸಂಸತ್ ನ ನಿಯಮದಲ್ಲಿ ಅವಕಾಶವಿದೆಯೇ? ಯಾರು ಎಲ್ಲಿ ಕೂರಬೇಕೆಂದು ನಿರ್ಧರಿಸುವವರು ಯಾರು? ಇಲ್ಲಿದೆ ವಿವರ.
ಲೋಕಸಭೆಯಲ್ಲಿ ಎಲ್ಲಾ ಸಂಸದರಿಗೂ ನಿಗದಿತ ಆಸನವಿದೆ. ಈ ಆಸನವನ್ನು ನಿರ್ಧರಿಸುವವರು ಲೋಕಸಭೆಯ ಸ್ಪೀಕರ್ ಆಗಿರುತ್ತಾರೆ. ಅವರು ನಿಗದಿಪಡಿಸಿದಂತೆಯೇ ಎಲ್ಲಾ ಸದಸ್ಯರೂ ತಮ್ಮ ಆಸನವನ್ನು ಸ್ವೀಕರಿಸಬೇಕು. ಲೋಕಸಭೆಯಲ್ಲಿ ತಮಗೆ ಇಷ್ಟ ಬಂದ ಆಸನದಲ್ಲಿ ಯಾರೂ ಕೂರುವಂತಿಲ್ಲ.
ಇದಕ್ಕೂ ಕಠಿಣ ನಿಯಮವಿದೆ. ಹೀಗಾಗಿ ಈಗ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅಕ್ಕ ಪಕ್ಕ ಕೂರಲಿದ್ದಾರೆಯೇ ಎಂದು ನಿರ್ಧರಿಸುವವರೂ ಲೋಕಸಭೆಯ ಸ್ಪೀಕರ್ ಆಗಿರಲಿದ್ದಾರೆ. ವಿಪಕ್ಷ ನಾಯಕನಾಗಿರುವುದರಿಂದ ರಾಹುಲ್ ಗಾಂಧಿಗೆ ಮೊದಲ ಸಾಲಿನಲ್ಲಿ ಆಸನ ನೀಡಲಾಗುತ್ತದೆ. ಆದರೆ ಪ್ರಿಯಾಂಕಾಗೂ ಇಲ್ಲಿಯೇ ಆಸನ ವ್ಯವಸ್ಥೆ ನೀಡುವುದು ಅನುಮಾನವಾಗಿದೆ.