ಮಲಪ್ಪುರಂ: 13 ವರ್ಷದ ಆಗಷ್ಟೇ ಅರಳುತ್ತಿದ್ದ ಕುಸುಮದಂತಿದ್ದ ಮಗಳನ್ನು ರೇಪ್ ಮಾಡಿದ್ದಲ್ಲದೆ, ಕೊಲೆ ಮಾಡಿದ್ದ ಆರೋಪಿ ಮೊಹಮ್ಮದ್ ಕೋಯಾನನ್ನು ಹತ್ಯೆ ಮಾಡಿದ್ದ ಕೇರಳದ ಶಂಕರನಾರಾಯಣ ಇದೀಗ ಇಹಲೋಕ ತ್ಯಜಿಸಿದ್ದಾರೆ. ಆತನ ಕತೆಯನ್ನೊಮ್ಮೆ ನೋಡಿ.
2001 ರ ಫೆಬ್ರವರಿ 9 ರಂದು ನಡೆದ ಕೃಷ್ಣಪ್ರಿಯ ಎನ್ನುವ ಬಾಲಕಿಯ ರೇಪ್ ಆಂಡ್ ಮರ್ಡರ್ ಕೇಸ್ ಇಡೀ ಕೇರಳವನ್ನೇ ಬೆಚ್ಚಿಬಿಳಿಸಿತ್ತು. ಏಳನೇ ತರಗತಿಯ ವಿದ್ಯಾರ್ಥಿನಿಯಾಗಿದ್ದ ಕೃಷ್ಣಪ್ರಿಯ ಶಾಲೆಗೆ ಹೋಗಿದ್ದವಳು ಮರಳಿ ಬಂದಿರಲಿಲ್ಲ. ಸಂಜೆ 4 ಗಂಟೆಗೆ ಎಂದಿನಂತೆ ಮನೆಗೆ ಬರುತ್ತಿದ್ದ ಮಗಳು ಬರದೇ ಇದ್ದಾಗ ಪೋಷಕರು ಗಾಬರಿಯಾಗಿದ್ದರು.
ಊರಿನವರೆಲ್ಲಾ ಸೇರಿಕೊಂಡು ಆಕೆಯನ್ನು ಹುಡುಕಾಡಿದ್ದರು. ಆದರೆ ಎಲ್ಲೂ ಪತ್ತೆಯಾಗಿರಲಿಲ್ಲ. ಕೊನೆಗೆ ಪಕ್ಕದ ಕಾಡಿನಲ್ಲಿ ಆಕೆಯ ಮೃತದೇಹ ಪತ್ತೆಯಾಗಿತ್ತು. ಆಕೆಯ ಕೊರಳು, ಕಿವಿಯಲ್ಲಿದ್ದ ಆಭರಣವನ್ನೂ ಕಿತ್ತು, ರೇಪ್ ಆಂಡ್ ಮರ್ಡರ್ ಮಾಡಿ ಆರೋಪಿ ಪರಾರಿಯಾಗಿದ್ದ.
ವಿಚಾರಣೆ ನಡೆಸಿದಾಗ ಅದೇ ಊರಿನ ಮೊಹಮ್ಮದ್ ಕೋಯ ಈ ಕೃತ್ಯವೆಸಗಿದ್ದ ಎಂಬುದು ಬಯಲಾಗಿತ್ತು. ಅದರಂತೆ ಆತ ಬಂಧನಕ್ಕೊಳಗಾದ. ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡು ಆತನಿಗೆ ಶಿಕ್ಷೆಯಾಗುತ್ತದೆ. ಆದರೆ 2002 ರ ಜುಲೈ ತಿಂಗಳಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗುತ್ತಾನೆ.
ಆದರೆ ಬಿಡುಗಡೆಯಾಗಿ ಆತ ಮನೆಗೆ ಮರಳುವುದೇ ಇಲ್ಲ. ಆತನನ್ನು ಶಂಕರನಾರಾಯಣ ತನ್ನ ಕೆಲವು ಬಂಧುಗಳೊಂದಿಗೆ ಸೇರಿಕೊಂಡು ನಾಡಕೋವಿಯಿಂದ ಕೊಂದು ಪಕ್ಕದ ಬಾವಿಗೆ ದೂಡಿ ಹೆಣವನ್ನು ಮಣ್ಣು ಮಾಡಿರುತ್ತಾರೆ. ಪ್ರಕರಣ ಸಂಬಂಧ ಶಂಕರನಾರಾಯಣ ಮತ್ತು ಆತನಿಗೆ ಸಹಕರಿಸಿದ ಬಂಧುಗಳ ಬಂಧನವಾಗುತ್ತದೆ.
ಮೊದಲು ಸೆಷನ್ಸ್ ಕೋರ್ಟ್ ಶಂಕರನಾರಾಯಣ ಮತ್ತು ಉಳಿದ ಆರೋಪಿಗಳಿಗೆ ಎರಡು ಜೀವಾವಧಿ ಶಿಕ್ಷೆ ನೀಡುತ್ತದೆ. ಆದರೆ ನಂತರ ಮತ್ತೆ ಕೇರಳ ಹೈಕೋರ್ಟ್ ನಲ್ಲಿ ವಿಚಾರಣೆ ನಡೆದು ಪ್ರಕರಣದಲ್ಲಿ ಸೂಕ್ತ ಸಾಕ್ಷ್ಯಗಳಿಲ್ಲದ ಕಾರಣ ಖುಲಾಸೆಗೊಳ್ಳುತ್ತಾರೆ. ಆರೋಪಿ ಮೊಹಮ್ಮದ್ ಕೋಯನಿಗೆ ಕ್ರಿಮಿನಲ್ ಹಿನ್ನಲೆಯಿದ್ದಿದ್ದರಿಂದ ಆತನನ್ನು ಬೇರೆ ಯಾರೋ ಶತ್ರುಗಳು ಕೊಲೆ ಮಾಡಿರುವ ಸಾಧ್ಯತೆಯೂ ಇದೆ ಎಂದು ಕೋರ್ಟ್ ಅಭಿಪ್ರಾಯಪಡುತ್ತದೆ.
ವಿಶೇಷವೆಂದರೆ ಶಂಕರನಾರಾಯಣ ಆರೋಪಿ ಮೊಹಮ್ಮದ್ ಕೋಯನನ್ನು ಕೊಂದರೂ ಯಾವುದೇ ಪಶ್ಚಾತ್ತಾಪ ಪಡುವುದಿಲ್ಲ. ತನ್ನ ಮಗಳನ್ನು ಕೊಂದವರಿಗೆ ತಾನು ತಕ್ಕ ಶಿಕ್ಷೆ ಕೊಟ್ಟೆನೆಂಬ ತೃಪ್ತಿ ಅವರಲ್ಲಿರುತ್ತದೆ. ವಿಶೇಷವೆಂದರೆ ಆತ ಜೈಲಿನಲ್ಲಿದ್ದಾಗ ಎಷ್ಟೋ ಮಂದಿ ನೀವು ನಮ್ಮ ತಂದೆ ಸಮಾನ ಎಂದು ಭಾವನಾತ್ಮಕ ಪತ್ರಗಳನ್ನು ಬರೆಯುತ್ತಿದ್ದರಂತೆ. ಇದೀಗ ಶಂಕರನಾರಾಯಣ ವಯೋ ಸಹಜ ಖಾಯಿಲೆಗಳಿಂದ 75 ನೇ ವರ್ಷದಲ್ಲಿ ಇಹಲೋಕ ತ್ಯಜಿಸಿದ್ದಾರೆ. ತನ್ನ ಕೊನೆಯ ಕಾಲದವರೆಗೂ ಮಗಳ ಬಗ್ಗೆಯೇ ಕನವರಸುತ್ತಿದ್ದರು ಎಂದು ನೆರೆಹೊರೆಯವರೂ ಹೇಳುತ್ತಿದ್ದಾರೆ.