ಹೈದರಾಬಾದ್: ಗರ್ಭಿಣಿ ಪತ್ನಿಗೆ ನಡು ರಸ್ತೆಯಲ್ಲೇ ತಲೆಗೆ ಕಲ್ಲು ಎತ್ತಿ ಹಾಕಿ ಪದೇ ಪದೇ ಹೊಡೆದ ಭಯಾನಕ ವಿಡಿಯೋವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹೈದರಾಬಾದ್ ನಲ್ಲ ಈ ಘಟನೆ ನಡೆದಿದೆ ಎನ್ನಲಾಗಿದೆ.
ಏಪ್ರಿಲ್ 1 ರ ರಾತ್ರಿ ಹೈದರಾಬಾದ್ ನ ಗಚಿಬೌಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪತಿ ಮತ್ತು ಪತ್ನಿ ನಡುವೆ ರಸ್ತೆಯಲ್ಲಿ ವಾಗ್ವಾದ ನಡೆದಿದೆ. ಇದಾದ ಬಳಿಕ ಪತಿ ಆಕೆಯನ್ನು ಹೊಡೆದು ಕೆಳಗೆ ಉರುಳಿಸಿದ್ದಾನೆ.
ಇಷ್ಟೂ ಸಾಲದೆಂಬಂತೆ ಆಕೆಯ ಮೇಲೆ ಕಲ್ಲು ಎತ್ತಿ ಪದೇ ಪದೇ ಚಚ್ಚಿ ಗಂಭೀರ ಗಾಯಗೊಳಿಸಿದ್ದಾನೆ. ಮಹಿಳೆ ಗಂಭೀರ ಗಾಯಗೊಂಡು ರಸ್ತೆಯಲ್ಲೇ ಬಿದ್ದಿದ್ದಾಳೆ. ಆಕೆಯನ್ನು ಅಲ್ಲೇ ಬಿಟ್ಟು ಆರೋಪಿ ಪತಿ ಬೈಕ್ ನಲ್ಲಿ ಪರಾರಿಯಾಗಿದ್ದಾನೆ.
ನಡು ರಸ್ತೆಯಲ್ಲೇ ಈ ಘಟನೆ ನಡೆದಿದ್ದರೂ ರಾತ್ರಿಯಾಗಿದ್ದರಿಂದ ಯಾರ ಗಮನಕ್ಕೂ ಬಂದಿರಲಿಲ್ಲ. ಬಳಿಕ ಮಹಿಳೆ ಬಿದ್ದಿರುವುದನ್ನು ಗಮನಿಸಿದ ದಾರಿಹೋಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿ ಪತಿಯನ್ನು ಮೊಹಮ್ಮದ್ ಬಸ್ರತ್ ಎಂದು ಗುರುತಿಸಲಾಗಿದೆ. ವಿಪರ್ಯಾಸವೆಂದರೆ ಮಹಿಳೆ 2 ತಿಂಗಳ ಗರ್ಭಿಣಿಯಾಗಿದ್ದಳು. ವಾಂತಿ ಸಮಸ್ಯೆಯಿಂದ ಬಳಲುತ್ತಿದ್ದ ಆಕೆ ಆಗಷ್ಟೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಳು.