Publish Date: Mon, 10 Aug 2026 (14:37 IST)
Updated Date: Mon, 10 Aug 2026 (14:40 IST)
ರಾಂಚಿ: ಜಾರ್ಖಂಡ್ ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ತಾರಕಕ್ಕೇರಿದ್ದು, ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳ್ವಿಯಾ ಟ್ವೀಟ್ ಮಾಡಿದ್ದು ರಾಹುಲ್ ಗಾಂಧಿ, ಕೇಜ್ರಿವಾಲ್, ಕಾಕ್ರೋಚ್ ಪಾರ್ಟಿ ಜನರು ಈಗ ಮಾತನಾಡಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ.
ಜಾರ್ಖಂಡ್‌ನ ರಾಂಚಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಹೆಮಂತ್ ಸೋರೆನ್ ನೇತೃತ್ವದ ಜಾರ್ಖಂಡ್ ಮುಕ್ತಿ ಮೋರ್ಚಾ (JMM) ಸರ್ಕಾರದ ಪೋಲಿಸರು ನಡೆಸಿದ ಭೀಕರ ಲಾಠಿಚಾರ್ಜ್ ಈಗ ಬೃಹತ್ ರಾಜಕೀಯ ದಂಗಲ್ಗೆ ಕಾರಣವಾಗಿದೆ.
ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಆಪ್ ನಾಯಕ ಅರವಿಂದ್ ಕೇಜ್ರಿವಾಲ್ ವಿರುದ್ಧ ಎಕ್ಸ್ (ಟ್ವಿಟರ್) ವೇದಿಕೆಯಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಮಿತ್ ಮಾಳವೀಯ ಅವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪೋಸ್ಟ್ ಮಾಡಿ, ವಿರೋಧ ಪಕ್ಷಗಳ "ಆಯ್ದ ಆಕ್ರೋಶ" ಮತ್ತು ದ್ವಿಮುಖ ನೀತಿಯನ್ನು ನೇರವಾಗಿ ಪ್ರಶ್ನಿಸಿದ್ದಾರೆ.
ಹೆಮಂತ್ ಸೋರೆನ್ ಅವರ ಆಡಳಿತದಲ್ಲಿ ಪೊಲೀಸರು ವಿದ್ಯಾರ್ಥಿಗಳ ಮೇಲೆ ಲಘು ಲಾಠಿಪ್ರಹಾರ ನಡೆಸಿದ ರೀತಿಯನ್ನು ಕಂಡ ಮೇಲಾದರೂ, ರಾಹುಲ್ ಗಾಂಧಿ, ಕೇಜ್ರಿವಾಲ್ ಹಾಗೂ ಅವರ ಬೆಂಬಲಿಗರು ರಾಜಕೀಯದ ಕನ್ನಡಕವನ್ನು ಕಳಚಿಟ್ಟು ಹೊರಬಂದು ವಿದ್ಯಾರ್ಥಿಗಳ ಹಿತಾಸಕ್ತಿಯ ಪರವಾಗಿ ಧ್ವನಿ ಎತ್ತಬೇಕು.
ಜಾರ್ಖಂಡ್ ಸಿಬ್ಬಂದಿ ಆಯ್ಕೆ ಆಯೋಗದ (JSSC) ಪರೀಕ್ಷಾಕ್ರಮ ಮತ್ತು ಅಕ್ರಮಗಳ ವಿರುದ್ಧ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳು ರಾಂಚಿಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದರು. ಜಾರ್ಖಂಡ್ ಪೊಲೀಸರು ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಚದುರಿಸಲು ಲಾಠಿಚಾರ್ಜ್ ನಡೆಸಿದ್ದರು. ಇತ್ತೀಚೆಗೆ ದೆಹಲಿಯಲ್ಲಿ ನೀಟ್ ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಿಯಂತ್ರಣ ಮೀರಿದಾಗ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರು. ಆಗ ರಾಹುಲ್ ಗಾಂಧಿ, ಕೇಜ್ರಿವಾಲ್ ಸೇರಿದಂತೆ ವಿಪಕ್ಷ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಆರೋಪದ ಸುರಿಮಳೆಯನ್ನೇ ಸುರಿಸಿದ್ದರು. ಇದೀಗ ಇಂಡಿ ಒಕ್ಕೂಟದ ಆಡಳಿತವಿರುವ ಜಾರ್ಖಂಡ್ ನಲ್ಲಿ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ನಡೆಸಲಾಗಿದೆ. ಇದರ ಬಗ್ಗೆ ಈಗ ಅಮಿತ್ ಮಾಳ್ವಿಯಾ ಟೀಕಿಸಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ