Publish Date: Sat, 25 Jul 2026 (11:44 IST)
Updated Date: Sat, 25 Jul 2026 (11:52 IST)
ದೇಶಾದ್ಯಂತ ತೀವ್ರ ಬಿರುಗಾಳಿ ಎಬ್ಬಿಸಿರುವ ನೀಟ್ ಪರೀಕ್ಷಾ ಅಕ್ರಮ ಮತ್ತು ಪೇಪರ್ ಸೋರಿಕೆ ವಿವಾದದ ಕುರಿತು ದಕ್ಷಿಣ ಭಾರತದ ಖ್ಯಾತ ನಟಿ ಜ್ಯೋತಿಕಾ ಅವರು ಗಂಭೀರವಾಗಿ ಸ್ಪಂದಿಸಿದ್ದಾರೆ. ದೆಹಲಿಯ ಜಂತರ್ ಮಂತರ್‌ನಲ್ಲಿ ಜಿಎನ್‌ಝಿ ಯುವಜನರು ಮತ್ತು ವಿದ್ಯಾರ್ಥಿಗಳು ನಡೆಸುತ್ತಿರುವ ಸುದೀರ್ಘ ಹೋರಾಟಕ್ಕೆ ಬಹಿರಂಗ ಐಕ್ಯದಾರ್ಢ್ಯ ಪ್ರಕಟಿಸಿರುವ ಅವರು, "ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಕ್ಷಣವೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು" ಎಂದು ಖಾರವಾಗಿ ಆಗ್ರಹಿಸಿದ್ದಾರೆ.
ಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಮ್‌ನಲ್ಲಿ ಈ ಕುರಿತು ಭಾವನಾತ್ಮಕ ಹಾಗೂ ಖಡಕ್ ಸಂದೇಶವೊಂದನ್ನು ಹಂಚಿಕೊಂಡಿರುವ ಜ್ಯೋತಿಕಾ, ವಿದ್ಯಾರ್ಥಿಗಳ ಸತತ ಶ್ರಮ ಮತ್ತು ಅವರ ಭವಿಷ್ಯದ ಜೊತೆ ಚೆಲ್ಲಾಟವಾಡುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ. ವಿದ್ಯಾರ್ಥಿ ಚಳವಳಿಯನ್ನು ಬೆಂಬಲಿಸಿ ಬರೆದುಕೊಂಡಿರುವ ಜ್ಯೋತಿಕಾ ಅವರ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಜ್ಯೋತಿಕಾ ಅವರ ಖಡಕ್ ಸಂದೇಶ
"ಧರ್ಮೇಂದ್ರ ಪ್ರಧಾನ್ ಅವರೇ, ನಿಮ್ಮ ಹುದ್ದೆಯಿಂದ ಕೆಳಗಿಳಿಯಿರಿ, ರಾಜೀನಾಮೆ ನೀಡಿ! ನಾನು ನಮ್ಮ ದೇಶದ ಭವಿಷ್ಯವಾದ ವಿದ್ಯಾರ್ಥಿಗಳ ಪರವಾಗಿ ಗಟ್ಟಿಯಾಗಿ ನಿಲ್ಲುತ್ತೇನೆ. ನಾನು ಆಡಳಿತದ ಹೊಣೆಗಾರಿಕೆಯ ಪರ, ಪ್ರಜಾಪ್ರಭುತ್ವ ಭಾರತದ ಪರ ಹಾಗೂ ಶೈಕ್ಷಣಿಕ ಸುಧಾರಣೆಗಳ ಪರವಾಗಿ ಧ್ವನಿ ಎತ್ತುತ್ತಿದ್ದೇನೆ. ಸೋನಮ್ ವಾಂಗ್ಚುಕ್, ಅಭಿಜೀತ್ ದೀಪ್ಕೆ, ಸೌರವ್ ದಾಸ್ ಅವರಂತಹ ಧೀರ ಮಕ್ಕಳನ್ನು ಬೆಳೆಸಿದ ತಾಯಂದಿರನ್ನು ನೋಡಿ ನಮಗೆ ಹೆಮ್ಮೆಯಾಗುತ್ತದೆ. ಪ್ರತಿಯೊಂದನ್ನೂ ಮುಕ್ತವಾಗಿ ಮತ್ತು ಸತ್ಯವಾಗಿ ಮಾತನಾಡುವ ಈ 'Gen Z' ತಲೆಮಾರನ್ನು ಕಂಡು ದೇಶವೇ ಹೆಮ್ಮೆಪಡುತ್ತಿದೆ. 'ನಾವೇ ಭಾರತ' ಎಂಬುದನ್ನು ನೀವು ಒಗ್ಗಟ್ಟಿನಿಂದ ನಿರೂಪಿಸಿದ್ದೀರಿ. ನಮ್ಮನ್ನು ನಿರ್ಭಯರನ್ನಾಗಿ ಮಾಡಿದ್ದಕ್ಕೆ ಧನ್ಯವಾದಗಳು. ಜೈ ಹಿಂದ್!"
ನೀಟ್ ಅಕ್ರಮದ ವಿರುದ್ಧ ನಟಿ ಜ್ಯೋತಿಕಾ ಮಾತ್ರವಲ್ಲದೆ, ದಕ್ಷಿಣ ಭಾರತ ಹಾಗೂ ಬಲಿವುಡ್ ಚಿತ್ರರಂಗದ ಹಲವು ಖ್ಯಾತ ನಟ-ನಟಿಯರು ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತಿದ್ದಾರೆ. ನಟ ಪ್ರಕಾಶ್ ರಾಜ್, ಮಮ್ಮುಟ್ಟಿ, ಟೊವಿನೊ ಥಾಮಸ್, ಪಾರ್ವತಿ ತಿರುವೋತ್ ಸೇರಿದಂತೆ ಹಲವು ಕಲಾವಿದರು ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿ, ಸರ್ಕಾರವು ತಕ್ಷಣವೇ ಶೈಕ್ಷಣಿಕ ಕ್ಷೇತ್ರದಲ್ಲಿ ಪಾರದರ್ಶಕತೆ ತರಬೇಕೆಂದು ಒತ್ತಾಯಿಸಿದ್ದಾರೆ.
ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಶಿಕ್ಷಣ ಇಲಾಖೆಯಲ್ಲಿ ಸಮಗ್ರ ಸುಧಾರಣೆಯಾಗಬೇಕು ಮತ್ತು ಅಕ್ರಮಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಜರುಗಬೇಕು ಎಂಬ ಕೂಗು ದಿನದಿಂದ ದಿನಕ್ಕೆ ಬಲವಾಗುತ್ತಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ