ಪ್ರಯಾಗ್ ರಾಜ್: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಸಂಗಮ ಸ್ಥಾನದ ನೀರಿನಲ್ಲಿ ಮಲದ ಬ್ಯಾಕ್ಟೀರಿಯಾ ಇದೆ ಎಂಬ ವರದಿಗಳ ಬಗ್ಗೆ ಸಿಎಂ ಯೋಗಿ ಆದಿತ್ಯನಾಥ್ ಪ್ರತಿಕ್ರಿಯೆ ನೀಡಿದ್ದಾರೆ.
ಸಾಕಷ್ಟು ಜನ ಸ್ನಾನ ಮಾಡಿರುವ ತ್ರಿವೇಣಿ ಸಂಗಮದ ನೀರಿನಲ್ಲಿ ಮಲದ ಬ್ಯಾಕ್ಟೀರಿಯಾ ಇದೆ. ಇದು ಕುಡಿಯಲು ಯೋಗ್ಯವಲ್ಲ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಹೇಳಿತ್ತು. ಈ ವರದಿಗಳ ಬೆನ್ನಲ್ಲೇ ಹಲವರು ಆತಂಕಕ್ಕೀಡಾಗಿದ್ದರು.
ಇದೀಗ ಈ ಬಗ್ಗೆ ಪ್ರತಿಕ್ರಿಯಿಸಿರುವ ಯೋಗಿ ಆದಿತ್ಯನಾಥ್, ಗಂಗಾ, ಯಮುನಾ, ಸರಸ್ವತಿ ಸಂಗಮದ ನೀರು ಪವಿತ್ರವಾಗಿದೆ. ಕುಂಭಮೇಳಕ್ಕೆ ಅಪಖ್ಯಾತಿ ತರಲು ಯಾರೋ ಈ ರೀತಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಸಂಗಮದ ನೀರು ಸ್ನಾನಕ್ಕೆ ಯೋಗ್ಯವಾಗಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಸನಾತನ ಗಂಗಾ, ಯಮುನಾ, ಸರಸ್ವತಿ ಮಾತೆ ಅಥವಾ ಕುಂಭದ ಬಗ್ಗೆ ಆಧಾರ ರಹಿತ ಆರೋಪ ಮಾಡುವುದು, ನಕಲಿ ವಿಡಿಯೋಗಳನ್ನು ಹರಿಯಬಿಡುವುದು 56 ಕೋಟಿ ಜನರ ನಂಬಿಕೆಯೊಂದಿಗೆ ಚೆಲ್ಲಾಟವಾಡಿದಂತೆ ಎಂದು ಯೋಗಿ ಗುಡುಗಿದ್ದಾರೆ.