ಹರಿಯಾಣ: ವಿಚ್ಛೇದನ ಪ್ರಕ್ರಿಯೆ ವೇಳೆ ಪತಿ, ಕಬಡ್ಡಿ ಆಟಗಾರ ದೀಪಕ್ ನಿವಾಸ್ ಹೂಡಾ ಮೇಲೆ ಮಾಜಿ ವಿಶ್ವ ಚಾಂಪಿಯನ್ ಬಾಕ್ಸರ್ ಸ್ವೀಟಿ ಬೂರಾ ಹಲ್ಲೆ ಮಾಡಿರುವ ಘಟನೆ ಬೆಳಕಿಗೆ.
ತಮ್ಮ ಪತಿ ಕಬಡ್ಡಿ ಆಟಗಾರ ದೀಪಕ್ ನಿವಾಸ್ ಹೂಡಾ ಮೇಲೆ ಹಲ್ಲೆ ನಡೆಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಘಟನೆ ಮಾರ್ಚ್ 15 ರಂದು ಹರಿಯಾಣದ ಹಿಸಾರ್‌ನ ಪೊಲೀಸ್ ಠಾಣೆಯೊಳಗೆ ನಡೆದಿದೆ ಎನ್ನಲಾಗಿದೆ.
ವರದಕ್ಷಿಣೆ ಕಿರುಕುಳ ಮತ್ತು ಹಲ್ಲೆ ಆರೋಪದ ಮೇಲೆ ಪತಿ ವಿರುದ್ಧ ಸ್ವೀಟಿ ಬೂರಾ ಈ ಹಿಂದೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವೀಡಿಯೊದಲ್ಲಿ, ಬೂರಾ ಸಂಭಾಷಣೆಯ ಸಮಯದಲ್ಲಿ ಹೂಡಾ ಕಡೆಗೆ ನುಗ್ಗಿ ಅವರ ಗಂಟಲು ಹಿಸುಕುತ್ತಿರುವುದು ಕಂಡುಬಂದಿದೆ. ಈ ವೇಳೆ ಮಧ್ಯಪ್ರವೇಶಿಸಿ ಸ್ವೀಟಿ ಅವರನ್ನು ಬೇರ್ಪಡಿಸಿದರು. ಆದರೆ ಪೊಲೀಸ್ ಠಾಣೆಯೊಳಗೆ ಎರಡೂ ಕಡೆಯವರ ನಡುವೆ ಬಿಸಿ ವಾದಗಳು ಮುಂದುವರೆದವು.
ಇದಕ್ಕೂ ಮೊದಲು, ಬೂರಾ ತಮ್ಮ ಏಷ್ಯನ್ ಗೇಮ್ಸ್ ಕಂಚಿನ ವಿಜೇತ ಕಬಡ್ಡಿ ಆಟಗಾರ ಪತಿ ದೀಪಕ್ ಹೂಡಾ ಮತ್ತು ಅವರ ಕುಟುಂಬದವರು ವರದಕ್ಷಿಣೆಗಾಗಿ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಎಫ್‌ಐಆರ್ ದಾಖಲಿಸಿದ್ದಾರೆ.
ಇಬ್ಬರು 2022 ರಲ್ಲಿ ವಿವಾಹವಾದರು. ಅರ್ಜುನ ಪ್ರಶಸ್ತಿ ಪುರಸ್ಕೃತ ಹೂಡಾ ವಿರುದ್ಧ ಬೂರಾ ಹರಿಯಾಣದ ಹಿಸಾರ್‌ನಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
"ಫೆಬ್ರವರಿ 25 ರಂದು ಸವೀತಿ ಬೂರಾ ಅವರ ಪತಿ ದೀಪಕ್ ಹೂಡಾ ವಿರುದ್ಧ ನೀಡಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ" ಎಂದು ಹಿಸಾರ್‌ನ ಮಹಿಳಾ ಪೊಲೀಸ್ ಠಾಣೆಯ ಎಸ್‌ಎಚ್‌ಒ ಸೀಮಾ ಹೇಳಿದರು.