ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸದ್ದು ಎಬ್ಬಿಸಿರುವ ಹನಿಟ್ರ್ಯಾಪ್ ಸಂಬಂಧ ಇಂದು ಸಂಜೆ 4.30ಕ್ಕೆ ಗೃಹ ಸಚಿವ ಜಿ. ಪರಮೇಶ್ವರ ಅವರನ್ನು ಭೇಟಿಮಾಡಿ ದೂರು ಸಲ್ಲಿಸುತ್ತೇನೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದರು.
ದೂರಿನ ಪ್ರತಿಯೊಂದಿಗೆ ಬೆಂಗಳೂರಿಗೆ ಬರುತ್ತಿರುವ ಅವರು ಪರಮೇಶ್ವರ ಅವರು ನೆಲಮಂಗಲದ ಸಮೀಪದ ಟಿ. ಬೇಗೂರಿನಲ್ಲಿರುವ ವಿಷಯ ತಿಳಿದು ಮಂಗಳವಾರ ಮಧ್ಯಾಹ್ನ ಅಲ್ಲಿಯೇ ಗೃಹ ಸಚಿವರನ್ನು ಭೇಟಿಮಾಡಿದರು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು.
ಪರಮೇಶ್ವರ್ ಅವರು ತಮ್ಮ ಮನೆಗೆ ಬಂದು ಭೇಟಿ ಮಾಡುವಂತೆ ಸೂಚಿಸಿದ್ದು, ಅಲ್ಲಿಗೆ ಹೋಗಿ ದೂರು ನೀಡುವೆ ಎಂದು ರಾಜಣ್ಣ ತಿಳಿಸಿದರು.
ದೂರು ಸಲ್ಲಿಸಿದ ಬಳಿಕ ಅದರ ಪ್ರತಿಯನ್ನು ಮಾಧ್ಯಮಗಳಿಗೂ ನೀಡುವೆ. ತನಿಖೆಯ ವಿಚಾರದಲ್ಲಿ ಗೃಹ ಸಚಿವರು ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎಂಬುದನ್ನು ಎರಡು ದಿನ ಕಾದು ನೋಡುವೆ ಎಂದರು.
ಹನಿಟ್ರ್ಯಾಪ್ ಯತ್ನದ ಹಿಂದೆ ಇರುವವರು ಯಾರು ಎಂಬುದನ್ನು ಈಗಲೇ ಹೇಳುವುದು ಕಷ್ಟ. ಆ ವ್ಯಕ್ತಿಗಳನ್ನು ಪತ್ತೆ ಹಚ್ಚುವುದಕ್ಕಾಗಿ ತನಿಖೆಯ ಅಗತ್ಯವಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.