ಬೆಂಗಳೂರು: ಹನಿಟ್ರ್ಯಾಪ್ ಅನ್ನು ಬಯಲಿಗೆ ತಂದ ಸೂತ್ರಧಾರಿ ಸಿಎಂ ಸಿದ್ದರಾಮಯ್ಯ ಎಂದು ವಿಪಕ್ಷ ನಾಯಕ ಆರ್ ಅಶೋಕ್ ನೇರ ಗಂಭೀರ ಆರೋಪ ಮಾಡಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭೆಯ ಕಲಾಪದ ವೇಳೆ ಸಚಿವ ಕೆ.ಎನ್.ರಾಜಣ್ಣ ಅವರು ಈ ಪ್ರಕರಣ ಕುರಿತು ಗೋಗರೆದ ಕಾರಣ, ಜವಾಬ್ದಾರಿಯುತ ವಿರೋಧ ಪಕ್ಷವಾಗಿ ನಾವು ಈ ಪ್ರಕರಣವನ್ನು ಪ್ರಸ್ತಾಪಿಸಿದೆವು ಎಂದರು.
ಇನ್ನೂ ಈ ವಿಚಾರವನ್ನು ಕೆಎನ್ ರಾಜಣ್ಣ ಹಾಗೂ ಗೃಹ ಸಚಿವ ಜಿ ಪರಮೇಶ್ವರ ಅವರು ಸಿಎಂ ಅವರನ್ನು ಭೇಟಿ ಮಾಡಿ, ಚರ್ಚಿಸಿಯೇ ಸದನಕ್ಕೆ ಬಂದಿದ್ದರು. ಈ ವಿಷಯವನ್ನು ಪ್ರಸ್ತಾಪಿಸಲು ಅವಕಾಶ ನೀಡಬೇಕು ಎಂಬ ಸಂದೇಶವನ್ನು ಸಚಿವರೇ ಸಭಾಧ್ಯಕ್ಷರಿಗೂ ರವಾನಿಸಿದ್ದರು. ಇದು ರಾಜ್ಯದ ಸಿಎಂ ಕುರ್ಚಿಗಾಗಿ ನಡೆಯುತ್ತಿರುವ ಸಮರದ ಒಂದು ಭಾಗ. ತಮ್ಮ ಕುರ್ಚಿಯನ್ನು ಉಳಿಸಿಕೊಳ್ಳಲು ಹನಿಟ್ರ್ಯಾಪ್ ವಿಚಾರವನ್ನು ಬಯಲಿಗೆ ತಂದಿದ್ದಾರೆ ಎಂದು ಹೇಳಿದರು.
ಈ ಪ್ರಕರಣ ಬಯಲಾದ ಬೆನ್ನಲ್ಲೇ ರಾಜ್ಯ ಸರ್ಕಾರ ನನ್ನದೂ, ಎಚ್.ಡಿ.ಕುಮಾರಸ್ವಾಮಿ ಅವರದೂ ಸೇರಿ ವಿರೋಧ ಪಕ್ಷಗಳ ನಾಯಕರು ದೂರವಾಣಿಗಳನ್ನು ಕದ್ದಾಲಿಕೆ ಮಾಡುತ್ತಿದೆ. ಕಾಂಗ್ರೆಸ್‌ನ ಆಯ್ದ ಶಾಸಕರ ದೂರವಾಣಿ ಕದ್ದಾಲಿಕೆ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಶಾಸಕರೂ ಆರೋಪಿಸಿದ್ದಾರೆ. ವಿರೋಧ ಪಕ್ಷಗಳನ್ನು ಬಗ್ಗು ಬಡಿಯಲು ಕದ್ದಾಲಿಕೆ ಮಾಡಿಸಲಾಗುತ್ತಿದೆ ಎಂದು ಅವರು ದೂರಿದರು.
ಕಾಂಗ್ರೆಸ್ ಪಕ್ಷದಲ್ಲಿ ಗ್ರಹಗತಿ ಬದಲಾಗುವ ಸೂಚನೆಯಿದೆ ಎಂದರು.
ಕಾಂಗ್ರೆಸ್‌ನ ಮಹಾನ್ ನಾಯಕ ಮತ್ತು ಮುಖ್ಯಮಂತ್ರಿ ನಡುವಿನ ಕುರ್ಚಿ ಕಿತ್ತಾಟದಲ್ಲಿ ಸರ್ಕಾರ ಸತ್ತು ಹೋಗಿದೆ ಎಂದು ಅವರು ಕಿಡಿಕಾರಿದರು.