ಕೊಚ್ಚಿ: ಮಾಲಿವುಡ್ ನಟಿ ಹನಿ ರೋಸ್ ಅವರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಬಂಧನವಾಗಿ ಜಾಮೀನು ಪಡೆದರೂ ಜೈಲಿನಿಂದ ಹೊರಬರಲು ನಿರಾಕರಿಸಿದ್ದಕ್ಕಾಗಿ ಚೆಮ್ಮನೂರ್ ಜುವೆಲ್ಲರ್ಸ್‌ನ ಮಾಲೀಕ ಬಾಬಿ ಚೆಮ್ಮನೂರ್ ಅವರನ್ನು ಕೇರಳ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಬಾಬಿ ಚೆಮ್ಮನೂರ್ ಅವರ ವರ್ತನೆಯಿಂದ ಕೆರಳಿದ ನ್ಯಾಯಮೂರ್ತಿ ಪಿ.ವಿ. ಕುಂಞಿಕೃಷ್ಣನ್, ಹೈಕೋರ್ಟ್ ಜತೆ ಆಟವಾಡಬೇಡಿ... ನೀಡಿರುವ ಜಾಮೀನು ಅನ್ನು ರದ್ದುಗೊಳಿಸಬಹುದು ಎಂದು ಎಚ್ಚರಿಸಿದ್ದಾರೆ.
ಜಾಮೀನು ಪಡೆದ ನಂತರವೂ ಏಕೆ ಜೈಲಿನಿಂದ ಹೊರ ಬರಲಿಲ್ಲ ಎಂಬುದರ ಕುರಿತು ವಿವರಣೆ ನೀಡುವಂತೆ ಹೈಕೋರ್ಟ್ ಆದೇಶಿಸಿದೆ. ನಟಿ ಹನಿ ರೋಸ್ ಅವರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಸಂಬಂಧ ಬಾಬಿ ಚೆಮ್ಮನೂರ್ ಅವರಿಗೆ ಹೈಕೋರ್ಟ್ ಮಂಗಳವಾರ ಜಾಮೀನು ಮಂಜೂರು ಮಾಡಿತ್ತು.
ಮಂಗಳವಾರ ಸಂಜೆ 4.08ಕ್ಕೆ ಜಾಮೀನು ಆದೇಶವನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದ್ದು, 4.45ಕ್ಕೆ ಬಿಡುಗಡೆ ಆದೇಶ ಹೊರಡಿಸಲಾಗಿದೆ. ಆದಾಗ್ಯೂ ಅವರನ್ನು ಏಕೆ ಜೈಲಿನಲ್ಲಿ ಇರಿಸಲಾಯಿತು ಎಂದು ಕೋರ್ಟ್ ಪ್ರಶ್ನಿಸಿದೆ.
ಬಿಡುಗಡೆ ಆದೇಶ ಪ್ರತಿಯನ್ನು ಚೆಮ್ಮನೂರ್ ಪರ ವಕೀಲರು ಸಲ್ಲಿಸಿರಲಿಲ್ಲ. ಹಾಗಾಗಿ ಅವರನ್ನು ಬಿಡುಗಡೆ ಮಾಡಲಿಲ್ಲ ಎಂದು ಪ್ರಾಸಿಕ್ಯೂಷನ್ ಹೈಕೋರ್ಟ್ ಗಮನಕ್ಕೆ ತಂದಿದೆ.