ತಿರುವನಂತಪುರಂ: ಚೆಮ್ಮನೂರು ಜ್ಯುವೆಲರ್ಸ್‌ನ ಬಾಬಿ ಚೆಮ್ಮನೂರ ವಿರುದ್ಧ ಲೈಂಗಿಕ ಕಿರುಕುಳ ದೂರು ನೀಡಿದ್ದ ಮಾಲಿವುಡ್ ನಟಿ ಹನಿ ರೋಸ್ ಈಗ 20 ಕಿಡಿಗೇಡಿ ಯೂಟ್ಯೂಬ್ ಚಾನಲ್‌ಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ತಮ್ಮ ವಿರುದ್ಧ ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಮಾನಹಾನಿ, ಲೈಂಗಿಕ ಕಿರುಕುಳ, ಅಶ್ಲೀಲ ಕಮೆಂಟ್ ಮಾಡುವವರಿಗೂ ಬಿಸಿ ಮುಟ್ಟಿಸಲು ಸಜ್ಜಾಗಿರುವ ಹನಿ ರೋಸ್ ಠಾಣೆ ಮೆಟ್ಟಿಲೇರಿದ್ದಾರೆ.
30ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ರೋಸ್, ಮಾಡೆಲ್ ಹನಿ ರೋಸ್, ಕನ್ನಡದ ಅಜಂತಾ ಹಾಗೂ ನಂಜನಗೂಡು ನಂಜುಂಡ ಎಂಬ ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ.
20 ಯೂಟ್ಯೂಬ್ ಚಾನಲ್‌ಗಳು ಹನಿ ರೋಸ್ ಬಗ್ಗೆ ಪ್ರಚೋದನಕಾರಿ ಹಾಗೂ ಮಾನಹಾನಿ ಮಾಡುವಂತೆ ಚಿತ್ರ, ವಿಡಿಯೊಗಳನ್ನು ತಿರುಚಿ ಹಾಕಿದ್ದಲ್ಲದೇ ತಪ್ಪು ಮಾಹಿತಿಯನ್ನು ಕೊಟ್ಟು ಜನಸಾಮಾನ್ಯರ ದಾರಿ ತಪ್ಪಿಸಿದ್ದಾರೆ ಎಂದು ರೋಸ್ ಆರೋಪಿಸಿದ್ದಾರೆ.
ಕೆಲ ದಿನಗಳ ಹಿಂದೆ ಫೇಸ್‌ಬುಕ್ ಪುಟದಲ್ಲಿಯೂ ಕೆಲವು ಕಿಡಿಗೇಡಿಗಳು ಅಶ್ಲೀಲ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ ಎಂದು ಹನಿ ರೋಸ್ ಆರೋಪಿಸಿ ದೂರು ದಾಖಲಿಸಿದ್ದರು.
ಪ್ರಕರಣ ಸಂಬಂಧ ಪಣಂಗಾಡು ಮೂಲದ 60 ವರ್ಷದ ಶಾಜಿ ಎಂಬುವರನ್ನು ಬಂಧಿಸಲಾಗಿತ್ತು. ಉಳಿದ ಎಲ್ಲಾ ಆರೋಪಿಗಳ ವಿರುದ್ಧ ಐಟಿ ಕಾಯ್ದೆಯ ಸೆಕ್ಷನ್ 75 ಮತ್ತು ಸೆಕ್ಷನ್ 67 ಸೇರಿದಂತೆ ಬಿಎನ್‌ಎಸ್‌ನ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.