ನವದೆಹಲಿ: ಬಿಜೆಪಿ, ಆರ್ ಎಸ್ಎಸ್ ವಶದಿಂದ ದೇಶ ರಕ್ಷಿಸಲು ಭಾರತದ ವಿರುದ್ಧ ಹೋರಾಡಬೇಕಿದೆ, ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಬೇರೆ ಯಾವುದೇ ದೇಶದಲ್ಲಿದ್ದರೂ ಇಷ್ಟೊತ್ತಿಗೆ ಅರೆಸ್ಟ್ ಆಗಬೇಕಿತ್ತು ಎಂದು ಇಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ದೆಹಲಿಯಲ್ಲಿ ಕಾಂಗ್ರೆಸ್ ಹೊಸ ಕಟ್ಟಡ ಉದ್ಘಾಟನೆ ವೇಳೆ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ನೂತನ ಕಚೇರಿ ಉದ್ಘಾಟನೆ ಬಳಿಕ ಮಾತನಾಡಿದ ರಾಹುಲ್ ಗಾಂಧಿ, ಬಿಜೆಪಿ ಮತ್ತು ಆರ್ ಎಸ್ಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಾವು ಆರ್ ಎಸ್ಎಸ್ ಸಿದ್ಧಾಂತದ ವಿರುದ್ಧ ಹೋರಾಡುತ್ತಿದ್ದೇವೆ. ಇಂದು ಬಿಜೆಪಿ ಮತ್ತು ಆರ್ ಎಸ್ಎಸ್ ದೇಶದ ಪ್ರತಿಯೊಂದು ಸಂಸ್ಥೆಯನ್ನು ವಶಪಡಿಸಿಕೊಂಡಿದೆ. ಹೀಗಾಗಿ ಈ ಎರಡು ಸಂಸ್ಥೆಗಳು ವಶಪಡಿಸಿರುವ ಭಾರತದ ವಿರುದ್ಧ ಹೋರಾಡಬೇಕಿದೆ ಎಂದಿದ್ದಾರೆ.
ಮಾಧ್ಯಮವು ಇಂದು ಮುಕ್ತ ಮತ್ತು ನ್ಯಾಯಯುತವಾಗಿಲ್ಲ. ಲೋಕಸಭಾ ಚುನಾವಣೆ ವೇಳೆ ಏಕಾಏಕಿ ಒಂದು ಕೋಟಿ ಹೊಸ ಮತದಾರರು ದಿಢೀರ್ ಕಾಣಿಸಿಕೊಂಡಿದ್ದಾರೆ. ಮತ ಚಲಾಯಿಸಿದವರ ಹೆಸರು ಮತ್ತು ವಿಳಾಸ ವಿವರ ಒದಗಿಸುವುದು ಚುನಾವಣಾ ಆಯೋಗದ ಕರ್ತವ್ಯ. ಆದರೆ ಈ ಬಾರಿ ಚುನಾವಣಾ ಆಯೋಗ ವಿವರ ನೀಡಲು ನಿರಾಕರಿಸಿತ್ತು. ನಮ್ಮ ಚುನಾವಣೆಯಲ್ಲಿ ಪಾರದರ್ಶಕತೆ ಕೊರತೆಯಿದೆ ಎಂಬುದಕ್ಕೆ ಇದು ಉದಾಹರಣೆ ಎಂದಿದ್ದಾರೆ.
ಈ ದೇಶದಲ್ಲಿ ಬಿಜೆಪಿಯನ್ನು ತಡೆಯಲು ಬೇರೆ ಯಾರಿಂದಲೂ ಸಾಧ್ಯವಿಲ್ಲ. ಅವರನ್ನು ತಡೆಯಬಲ್ಲ ಏಕೈಕ ಶಕ್ತಿ ಕಾಂಗ್ರೆಸ್. ನಮ್ಮ ಸಿದ್ಧಾಂತ ನಿನ್ನೆ ಮೊನ್ನೆ ಹುಟ್ಟಿಕೊಂಡಿದ್ದಲ್ಲ. ಇಂದು ಅಧಿಕಾರದಲ್ಲಿರುವ ಜನರು ತ್ರಿವರ್ಣ ಧ್ವಜಕ್ಕೆ ನಮಸ್ಕರಿಸುವುದಿಲ್ಲ. ರಾಷ್ಟ್ರಧ್ವಜವನ್ನು ನಂಬುವುದಿಲ್ಲ. ಅವರ ಭಾರತ ಸಂಪೂರ್ಣವಾಗಿ ವಿಭಿನ್ನ ದೃಷ್ಟಿಕೋನವನ್ನು ಹೊಂದಿರುವ ಭಾರತ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇನ್ನು, ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ವಿರುದ್ಧವೂ ವಾಗ್ದಾಳಿ ನಡೆಸಿರುವ ಅವರು ಅವರಂತಹ ವ್ಯಕ್ತಿ ಬೇರೆ ಯಾವುದೇ ದೇಶದಲ್ಲಿದ್ದರೂ ಅರೆಸ್ಟ್ ಆಗಬೇಕಿತ್ತು. ಅವರು ಹೇಳುತ್ತಾರೆ 1947 ರಲ್ಲಿ ಭಾರತಕ್ಕೆ ನಿಜವಾಗಿ ಸ್ವಾತಂತ್ರ್ಯ ಬರಲಿಲ್ಲ. ರಾಮಮಂದಿರ ನಿರ್ಮಾಣವಾದ ಬಳಿಕ ಭಾರತ ಸ್ವತಂತ್ರವಾಯಿತು ಎಂದು. ಅವರ ಪ್ರಕಾರ ಸಂವಿಧಾನ ನಮ್ಮ ಸ್ವಾತಂತ್ರ್ಯದ ಪ್ರತೀಕವಲ್ಲ ಎನ್ನುತ್ತಾರೆ. ಪ್ರತಿನಿತ್ಯ ಅವರು ಸಂವಿಧಾನದ ವಿರುದ್ಧ ದಾಳಿ ಮಾಡುತ್ತಲೇ ಇದ್ದಾರೆ. ಪಬ್ಲಿಕ್ ಆಗಿ ಸಂವಿಧಾನ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ. ಬೇರೆ ಯಾವುದೇ ದೇಶದಲ್ಲಿ ಆಗಿದ್ದರೂ ಅವರು ಅರೆಸ್ಟ್ ಆಗುತ್ತಿದ್ದರು ಎಂದು ರಾಹುಲ್ ಹೇಳಿದ್ದಾರೆ.