ಬೆಂಗಳೂರು: ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದ ಪ್ರಕರಣದಲ್ಲಿ ಸಂತ್ರಸ್ತ ಮಾಲಿಕರಿಗೆ ಸಚಿವ ಜಮೀರ್ ಅಹ್ಮದ್ ಕೊಟ್ಟ ಮಾತಿನಂತೇ ಹಸು ಕೊಡಿಸಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ತಮ್ಮ ಸ್ವಕ್ಷೇತ್ರದಲ್ಲಿ ಶನಿವಾರ ತಡರಾತ್ರಿ ದುರುಳರು ಮೂರು ಹಸುಗಳ ಕೆಚ್ಚಲು ಕುಯ್ದು ಮಚ್ಚಿನಿಂದ ಹಲ್ಲೆ ಮಾಡಿ ಕ್ರೌರ್ಯ ಮೆರೆದಿದ್ದರು. ಈ ಘಟನೆ ಬಗ್ಗೆ ಭಾರೀ ಆಕ್ರೋಶ ಕೇಳಿಬಂದಿತ್ತು. ಘಟನೆಗೆ ಸಂಬಂಧಿಸಿದಂತೆ ಶೇಖ್ ನಸ್ರು ಎಂಬಾತನನ್ನು ಬಂಧಿಸಲಾಗಿತ್ತು.
ಚಾಮರಾಜಪೇಟೆ ಸಚಿವ ಜಮೀರ್ ಅಹ್ಮದ್ ಅವರ ಕ್ಷೇತ್ರವಾಗಿದೆ. ಹೀಗಾಗಿ ಸಂತ್ರಸ್ತರ ಮನೆಗೆ ಭೇಟಿ ಕೊಟ್ಟ ಸಚಿವರು ಮೂರು ಹಸು ಕೊಡಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ ಈಗ ಮೂರು ಹಸುಗಳನ್ನು ಕೊಡಿಸಿದ್ದಾರೆ.
ಹಸುಗಳ ಜೊತೆ ಫೋಟೋಗೆ ಪೋಸ್ ಕೊಟ್ಟ ಜಮೀರ್ ಅಹ್ಮದ್ ಮಾಲಿಕರಿಗೆ ಹಸ್ತಾಂತರಿಸಿದರು. ಮೂರು ಲಕ್ಷ ರೂ. ವೆಚ್ಚದಲ್ಲಿ ತಾವೇ ಹಸು ಖರೀದಿಸಿ ಮಾಲಿಕರಿಗೆ ನೀಡಿದ್ದಾರೆ. ಮೊದಲು ಮಾಲಿಕ ಕರ್ಣ ಹಸು ಪಡೆದುಕೊಳ್ಳಲು ನಿರಾಕರಿಸಿದ್ದರು. ಆದರೆ ಅವರ ಸಹೋದರಿ ಅಮುದಾ ಹಸು ಸ್ವೀಕರಿಸಿದ್ದು ಸಹೋದರನ ಪರವಾಗಿ ಕ್ಷಮೆ ಯಾಚಿಸಿದ್ದಾರೆ.