ನವದೆಹಲಿ: ಡುಬ್ಲಿಕೇಟ್ ಪ್ರಮಾಣಪತ್ರ ಬಳಸಿ ನಾಗರಿಕ ಸೇವಾ ಪರೀಕ್ಷೆಯ ಲಾಭ ಪಡೆದು, ಹುದ್ದೆಯಿಂದ ವಜಾಗೊಂಡಿರುವ ಪೂಜಾ ಖೇಡ್ಕರ್ ಅವರನ್ನು ಫೆ. 14ರವರೆಗೆ ಬಂಧಿಸದಂತೆ ಸುಪ್ರೀಂ ಕೋರ್ಟ್ ರಕ್ಷಣೆ ನೀಡಿದೆ. ಬಂಧನ ಭೀತಿಯಲ್ಲಿದ್ದ ಪೂಜಾಗೆ ಬಿಗ್ ರಿಲೀಫ್ ಸಿಕ್ಕಿದೆ
ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಐಎಎಸ್ ಪ್ರೊಬೆಷನರಿ ಮಾಜಿ ಅಧಿಕಾರಿ ಖೇಡ್ಕರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ವಿ ನಾಗರತ್ನ ಹಾಗೂ ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠ, ಈ ಬಗ್ಗೆ ಆದೇಶ ಹೊರಡಿಸಿ ದೆಹಲಿ ಸರ್ಕಾರ ಹಾಗೂ ಯುಪಿಎಸ್‌ಸಿ ಬೋರ್ಡ್‌ಗೆ ನೋಟಿಸ್ ಜಾರಿ ಮಾಡಿತು.
ಫೆ. 14ರ ಒಳಗಾಗಿ ನೋಟಿಸ್‌ಗೆ ಉತ್ತರಿಸಬೇಕು ಎಂದಿರುವ ನ್ಯಾಯಾಲಯವು, ಆವರೆಗೂ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳಬಾರದು ಎಂದು ಸೂಚಿಸಿದೆ. ಖೇಡ್ಕರ್ ಪರ ಹಾಜರಾದ ಹಿರಿಯ ವಕೀಲ ಸಿದ್ಧಾರ್ಥ್ ಲುಥ್ರಾ, ನಿರೀಕ್ಷಣಾ ಜಾಮೀನು ರದ್ದು ಮಾಡಿದ ಹೈಕೋರ್ಟ್ ಅಭಿಪ್ರಾಯಗಳ ವಿರುದ್ಧ ಗಂಭೀರ ವಾದ ಮಾಡಿದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ಕೋರ್ಟ್, ಈವರೆಗೂ ಖೇಡ್ಕರ್ ಅವರಿಗೆ ಏನೂ ಆಗಿಲ್ಲ. ಆವರನ್ನು ಯಾರೂ ಮುಟ್ಟಿಲ್ಲ ಎಂದಿತು. ಖೇಡ್ಕರ್ ಈಗೇನು ಮಾಡುತ್ತಿದ್ದಾರೆ ಎನ್ನುವ ನ್ಯಾಯಪೀಠದ ಪ್ರಶ್ನೆಗೆ ಉತ್ತರಿಸಿದ ವಕೀಲರು, ಸದ್ಯ ಅವರು ಕೆಲಸ ಕಳೆದುಕೊಂಡಿದ್ದಾರೆ ಎಂದು ಹೇಳಿದರು.