ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಬೆನ್ನಲ್ಲೇ ನಿತೀಶ್ ಕುಮಾರ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲದೆ, ದಾಖಲೆಯ ಹತ್ತನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಸಿದ್ಧತೆ ನಡೆಸುತ್ತಿದ್ದಾರೆ.
ಬಿಹಾರದ ಮುಖ್ಯಮಂತ್ರಿ ಆಗಲು ಎನ್‌ಡಿಎ ಮಿತ್ರಪಕ್ಷಗಳ ಬೆಂಬಲ ಹೊಂದಿರುವ ನಿತೀಶ್ ಕುಮಾರ್ ಇಂದು ಕೊನೆಯ ಸಚಿವ ಸಂಪುಟ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಂಪುಟ ವಿಸರ್ಜನೆ ಮಾಡುವ ನಿರ್ಧಾರ ಅಂಗೀಕರಿಸಿದರು.. ನಂತರ ತಮ್ಮ ರಾಜೀನಾಮೆಯನ್ನು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರಿಗೆ ಸಲ್ಲಿಸಿದ್ದಾರೆ.
ಎನ್‌ಡಿಎ ಸರ್ಕಾರ ನವೆಂಬರ್ 20ರಂದು ಪಾಟ್ನಾದ ಐತಿಹಾಸಿಕ ಗಾಂಧಿ ಮೈದಾನದಲ್ಲಿ ಪ್ರಮಾಣವಚನ ಸ್ವೀಕರಿಸಲಿದೆ. ಬಿಹಾರದಲ್ಲಿ ನೂತನ ಎನ್‌ಡಿಎ ಸರ್ಕಾರ ರಚನೆಗೆ ವೇದಿಕೆ ಸಿದ್ಧವಾಗುತ್ತಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎಲ್‌ಡಿಎ ಮೈತ್ರಿಕೂಟ 202 ಸ್ಥಾನಗಳನ್ನು ಗಳಿಸಿತು. ಬಿಜೆಪಿ 89 ಸ್ಥಾನ ಪಡೆಯುವುದರೊಂದಿಗೆ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಜೆಡಿಯು 85, ಎಲ್ ಜೆಪಿ 19 ಜಯ ಸಾಧಿಸಿದೆ. ಕಾಂಗ್ರೆಸ್, ಆರ್ ಜೆಡಿ ಹಾಗೂ ಮೂರು ಎಡ ಪಕ್ಷಗಳನ್ನು ಒಳಗೊಂಡಿರುವ ಮಹಾಘಟಬಂಧನ್ 35 ಸ್ಥಾನ ಗಡಿಯನ್ನು ದಾಟಲು ಪರದಾಡಿದೆ.