ಢಾಕಾ: ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರಿಗೆ ಮಾನವ ಹಕ್ಕು ಉಲ್ಲಂಘನೆ ಪ್ರಕರಣದಲ್ಲಿ ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ ದೋಷಿ ಎಂದು ತೀರ್ಪು ನೀಡಿ, ಗಲ್ಲು ಶಿಕ್ಷೆ ಪ್ರಕಟಿಸಿದೆ.
ಇದು ಗರಿಷ್ಠ ಶಿಕ್ಷೆಗೆ ಅರ್ಹವಾಗಿರುವ ಪ್ರಕರಣ ಎಂದು ತೀರ್ಪಿನಲ್ಲಿ ಉಲ್ಲೇಖಿಸಿದೆ. ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯ ತ್ರಿಸದಸ್ಯ ನ್ಯಾಯಪೀಠವು ಶೇಖ್ ಹಸೀನಾ ಅವರ ಮೇಲಿರುವ ಆರೋಪ ಸಾಬೀತಾಗಿದೆ ಎಂದು ಪ್ರಕಟಿಸಿದ್ದು ಶೇಖ್ ಹಸೀನಾ ಮಾನವ ಹಕ್ಕುಗಳ ಅಪರಾಧ ಎಸಗಿದ್ದಾರೆ.
ಶೇಖ್ ಹಸೀನಾ ಮಾತ್ರವಲ್ಲದೇ ಅವರ ಆಪ್ತರಾಗಿದ್ದ ಮಾಜಿ ಗೃಹ ಸಚಿವ ಅಸಾದುಜ್ಜಮಾನ್ ಖಾನ್ ಕಮಲ್ ಮತ್ತು ಮಾಜಿ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಚೌಧರಿ ಅಬ್ದುಲ್ಲಾ ಅಲ್-ಮಾಮುನ್ ಅವರನ್ನೂ ಕೋರ್ಟ್ ದೋಷಿ ಎಂದು ಹೇಳಿದೆ.
ಕಳೆದ ವರ್ಷ ವಿದ್ಯಾರ್ಥಿಗಳ ನೇತೃತ್ವದಲ್ಲಿ ದೇಶವ್ಯಾಪಕವಾಗಿ ಭುಗಿಲೆದ್ದ ದಂಗೆಗಳ ಮೇಲಿನ ಮಾರಕ ದಮನಕ್ಕೆ ಹಸೀನಾ ನೇರ ಸೂಚನೆ ನೀಡಿದ್ದಾಗಿ ನ್ಯಾಯಾಲಯವು ಹೇಳಿದೆ. ಶೇಖ್ ಹಸೀನಾ ಅವರ ಈ ನಡೆಯಿಂದ ಬಾಂಗ್ಲಾದೇಶದಲ್ಲಿ ಸಾಕಷ್ಟು ಹಿಂಸಾಚಾರ ನಡೆದಿತ್ತು. ನೂರಾರು ಪ್ರಜೆಗಳು ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಶೇಖ್ ಹಸೀನಾರನ್ನು ಪ್ರಮುಖ ಆರೋಪಿಯಾಗಿಸಲಾಗಿತ್ತು.
ಈ ಆದೇಶಗಳನ್ನು ಹೊರಡಿಸುವ ಮೂಲಕ ಶೇಖ್ ಹಸೀನಾ ಮತ್ತು ಪೊಲೀಸ್ ಐಜಿ ಅವರ ನಿಷ್ಕ್ರಿಯತೆಯ ಮೂಲಕ ವಿದ್ಯಾರ್ಥಿಗಳನ್ನು ಹತ್ಯೆ ಮಾಡಲಾಗಿದೆ. ಈ ಹತ್ಯೆಗಳು ಪ್ರಧಾನಿ ಶೇಖ್ ಹಸೀನಾ ಅವರ ಆದೇಶ ಮತ್ತು ಅವರ ಅರಿವುನಲ್ಲೇ ನಡೆದಿದೆ. ಇಂತಹ ಕೃತ್ಯಗಳನ್ನು ಎಸಗುವ ಮೂಲಕ ಮಾನವೀಯತೆಯ ವಿರುದ್ಧ ಅಪರಾಧಗಳನ್ನು ಮಾಡಿದ್ದಾರೆ ಎಂದು ಕೋರ್ಟ್ ಹೇಳಿದೆ.