ನವದೆಹಲಿ: ಹಿಂದೆ ಟರ್ಕಿಯಲ್ಲಿ ಭೂಕಂಪವಾದಾಗ ಮೊದಲು ಸಹಾಯ ಮಾಡಿದ್ದೇ ಭಾರತ. ಆದರೆ ಈಗ ಅಯ್ಯೋ ಪಾಪ ಎಂದು ಸಹಾಯ ಮಾಡಿದ ಭಾರತಕ್ಕೆ ಟರ್ಕಿ ಮಾಡುತ್ತಿರೋದು ಏನು?
2023 ರಲ್ಲಿ ಟರ್ಕಿ ದೇಶದಲ್ಲಿ ಭಾರೀ ಭೂಕಂಪವಾಗಿತ್ತು. ಆಗ ಆ ದೇಶಕ್ಕೆ ಔಷಧಿ, ಆಹಾರ ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ಭಾರತ ಕಳುಹಿಸಿಕೊಟ್ಟು ಮಾನವೀಯತೆ ಮೆರೆದಿತ್ತು. ಆದರೆ ಈಗ ಅನ್ನ ಹಾಕಿದ ಕೃತಜ್ಞತೆಯೂ ಇಲ್ಲದೇ ಟರ್ಕಿ ಬೆನ್ನಿಗೆ ಚೂರಿ ಇರಿಯುತ್ತಿದೆ.
ಇದೀಗ ದೆಹಲಿಯಲ್ಲಿ ಬಾಂಬ್ ಸ್ಪೋಟ ನಡೆಸಿದ ಉಗ್ರ ಡಾ ಉಮರ್ ನಬಿ ಮತ್ತು ಆತನ ಸಹಚರರು ಭಾರತದಲ್ಲಿ ಉಗ್ರ ಕೃತ್ಯ ನಡೆಸಲು ಯೋಜನೆ ರೂಪಿಸುವ ಸಲುವಾಗಿ ಟರ್ಕಿ ದೇಶಕ್ಕೆ ಭೇಟಿ ನೀಡಿದ್ದರು ಎಂದು ಬಯಲಾಗಿದೆ. ಟರ್ಕಿಯಲ್ಲಿ ಜೈಶ್ ಇ ಮೊಹಮ್ಮದ್ ಸಂಘಟನೆಯ ಕಮಾಂಡರ್ ನನ್ನು ಭೇಟಿ ಮಾಡಿದ್ದ ಈ ಟೆರರ್ ಗ್ಯಾಂಗ್ ಭಾರತದಲ್ಲಿ ಭಯೋತ್ಪಾದಕ ಕೃತ್ಯವೆಸಗಲು ಸ್ಕೆಚ್ ಹಾಕಿತ್ತು. ತನಗೆ ಸಹಾಯ ಮಾಡಿದ ಭಾರತದ ವಿರುದ್ಧವೇ ಸಂಚು ರೂಪಿಸುವವರಿಗೆ ಟರ್ಕಿ ಆಶ್ರಯ ಒದಗಿಸುತ್ತಿದೆ ಎನ್ನುವುದಕ್ಕೆ ತನಿಖಾಧಿಕಾರಿಗಳಿಗೆ ಮಹತ್ವದ ಸಾಕ್ಷಿಗಳೇ ಸಿಕ್ಕಿವೆ.
ಇನ್ನು, ಇದಕ್ಕೆ ಮೊದಲು ಪಾಕಿಸ್ತಾನದ ಮೇಲೆ ಭಾರತ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ದಾಳಿ ನಡೆಸಿ ಉಗ್ರರನ್ನು ಮಟ್ಟ ಹಾಕುವಾಗಲೂ ಟರ್ಕಿ ಮಾಡಿದ ಸಹಾಯದ ಕೃತಜ್ಞತೆಯೂ ಇಲ್ಲದೇ ಪಾಕಿಸ್ತಾನಕ್ಕೆ ಮಿಲಿಟರಿ ಉತ್ಪನ್ನಗಳನ್ನು ಕಳುಹಿಸಿಕೊಡುವ ಮೂಲಕ ವಿಶ್ವಾಸದ್ರೋಹ ಮಾಡಿತ್ತು. ಇದೀಗ ಉಗ್ರರಿಗೂ ಟರ್ಕಿ ಸೇಫ್ ತಾಣಗಳಾಗುತ್ತಿರುವುದು ಆತಂಕದ ವಿಚಾರವಾಗಿದೆ.