ಹೈದರಾಬಾದ್: ಮೆಕ್ಕಾ–ಮೇದಿನಾ ಯಾತ್ರೆಗೆ ತೆರಳಿದ್ದ ತೆಲಂಗಾಣದ 45ಕ್ಕೂ ಅಧಿಕ ಮಂದಿ ಸೌದಿ ಅರೇಬಿಯಾದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಖಾಸಗಿ ಬಸ್, ಟ್ಯಾಂಕರ್‌ಗೆ ಅಪ್ಪಳಿಸಿದ್ದಕ್ಕೆ ಬಸ್ ಹೊತ್ತಿ ಉರಿದಿದ್ದು 45ಮಂದಿ ಮೃತಪಟ್ಟಿರುವುದು ವರದಿಯಾಗಿದೆ. ಮೃತರಲ್ಲಿ 20 ಮಹಿಳೆಯರು 12 ಮಕ್ಕಳು ಹಾಗೂ ಉಳಿದವರು ವಯಸ್ಕ ಪುರುಷರು ಎಂದು ತಿಳಿದು ಬಂದಿದೆ. ಘಟನೆಗೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.
ರಿಯಾದ್‌ನಲ್ಲಿರುವ ಭಾರತದ ರಾಯಭಾರ ಕಚೇರಿ ಜೊತೆ ನಿರಂತರ ಸಂಪರ್ಕ ಸಾಧಿಸಿ ಸಂತ್ರಸ್ತರ ನೆರವಿಗೆ ಧಾವಿಸುವಂತೆ ತಮ್ಮ ಅಧಿಕಾರಿಗಳಿಗೆ ಸಿಎಂ ರೇವಂತ್ ರೆಡ್ಡಿ ಸೂಚಿಸಿದ್ದಾರೆ.
ಭಾರತದಿಂದ ಕಳೆದ ನವೆಂಬರ್ 9ರಂದು ಮೆಕ್ಕಾ–ಮೇದಿನಾ ಯಾತ್ರೆಗೆ ತೆರಳಿದ್ದ ತಂಡ, ಮೆಕ್ಕಾದಲ್ಲಿ ಉಮ್ರಾ ಯಾತ್ರೆ ಮುಗಿಸಿಕೊಂಡು ಭಾನುವಾರ ಮೇದಿನಾಕ್ಕೆ ಖಾಸಗಿ ಬಸ್‌ನಲ್ಲಿ ತೆರಳುತ್ತಿತ್ತು. ಈ ವೇಳೆ ಮಾರ್ಗಮಧ್ಯೆ ಅವಘಡ ಸಂಭವಿಸಿದೆ ಎಂದು ವರದಿಗಳು ಹೇಳಿವೆ.
ಹೈದರಾಬಾದ್‌ನ ನಾಂಪಲ್ಲಿಯ ಅಲ್ ಮದೀನ ಅಲ್ ಮೀನಾ ಟ್ರಾವೆಲ್ ಏಜನ್ಸಿಯ ಮೂಲಕ ಒಂದು ತಂಡವು ಸೌದಿಗೆ ತೆರಳಿತ್ತು ಎಂದು ತಿಳಿದು ಬಂದಿದೆ.