ಪಾಟ್ನಾ: ಬಿಹಾರದಲ್ಲಿ ಎನ್ ಡಿಎ ದಾಖಲೆಯ ಬಹುಮತದೊಂದಿಗೆ ಚುನಾವಣೆಯೇನೋ ಗೆದ್ದಿತು. ಆದರೆ ಈಗ ಹೊಸ ಸಿಎಂ ಯಾರು ಎಂಬ ಚರ್ಚೆ ಶುರುವಾಗಿದೆ.
ಕಳೆದ ಬಾರಿ ಬಿಜೆಪಿ, ಎಲ್ ಜೆಪಿ ಹೆಚ್ಚು ಸ್ಥಾನ ಗೆದ್ದಿರಲಿಲ್ಲ. ಜೆಡಿಯು ಅತೀ ದೊಡ್ಡ ಪಕ್ಷವಾಗಿತ್ತು. ಆದರೆ ಈ ಬಾರಿ ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಎಲ್ ಜೆಪಿ ಕೂಡಾ 20 ಸ್ಥಾನ ಗೆದ್ದಿದೆ. ಹೀಗಾಗಿ ಈ ಎರಡೂ ಪಕ್ಷಗಳ ಬೇಡಿಕೆಯನ್ನೂ ನಿತೀಶ್ ಕುಮಾರ್ ಪರಿಗಣಿಸಬೇಕಾಗುತ್ತದೆ.
ಈ ಬಾರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಚುನಾವಣೆ ಹೋಗುವುದು ಎಂದು ಬಿಜೆಪಿ ಘೋಷಿಸಿದ್ದರೂ ಅವರೇ ಮುಖ್ಯಮಂತ್ರಿ ಎಂದು ಘೋಷಿಸಿರಲಿಲ್ಲ. ಆದರೆ ಮುಖ್ಯಮಂತ್ರಿಯಾಗಿ ಅವರೇ ಮುಂದುವರಿಯುವ ಸಾಧ್ಯತೆಯೇ ಹೆಚ್ಚು.
ಒಂದು ವೇಳೆ ಅವರೇ ಮುಖ್ಯಮಂತ್ರಿಯಾದರೆ ಉಪಮುಖ್ಯಮಂತ್ರಿ ಸ್ಥಾನ ಬಿಜೆಪಿಗೆ ಹೋಗಬಹುದು. ಎಲ್ ಜೆಪಿ ಕೂಡಾ ಪ್ರಮುಖ ಖಾತೆಗೆ ಬೇಡಿಕೆಯಿಡಬಹದು. ವಿಶೇಷವಾಗಿ ಹಣಕಾಸು, ಪಿಡಬ್ಲ್ಯು ಇಲಾಖೆ ಸೇರಿದಂತೆ ಪ್ರಮುಖ ಖಾತೆಗಳಿಗೆ ಬಿಜೆಪಿ ಬೇಡಿಕೆಯಿಡಬಹುದು.
ಇದೀಗ ಬಿಜೆಪಿ ನಾಯಕ ವಿನೋದ್ ತಾವ್ಡೆ ದೆಹಲಿಗೆ ತೆರಳಿ ಅಮಿತ್ ಶಾ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಸರ್ಕಾರ ರಚನೆ ಬಗ್ಗೆ ದೆಹಲಿ ನಾಯಕರ ಸಲಹೆ ಪಡೆದು ನಿತೀಶ್ ಕುಮಾರ್ ಜೊತೆ ವಿನೋದ್ ಮಾತುಕತೆ ನಡೆಸಬಹುದು. ಅದಾದ ಬಳಿಕ ರಾಜ್ಯಪಾಲರ ಬಳಿ ತೆರಳಿ ಸರ್ಕಾರ ರಚನೆ ಬಗ್ಗೆ ಹಕ್ಕು ಮಂಡಿಸಬಹುದು.