ನವದೆಹಲಿ: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಬಳಿಕ ಬಿಜೆಪಿ ಮುಖ್ಯ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಮುಂದಿನ ನಾಲ್ಕು ಟಾರ್ಗೆಟ್ ಯಾವುದೆಂದು ತಿಳಿಸಿದ್ದಾರೆ.
ಬಿಹಾರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ 202 ಸ್ಥಾನಗಳನ್ನು ಪಡೆದುಕೊಂಡು ಅಭೂತಪೂರ್ವ ಗೆಲುವು ಸಾಧಿಸಿದೆ. ಈ ಹಿನ್ನಲೆಯಲ್ಲಿ ಇಂದು ಮೋದಿ ಬಿಜೆಪಿ ಕಚೇರಿಗೆ ಬಂದು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಎನ್ ಡಿಎ ಮೈತ್ರಿಕೂಟಕ್ಕೆ ಮತ್ತೆ ಅಧಿಕಾರ ನೀಡಿರುವುದಕ್ಕೆ ಬಿಹಾರದ ಜನತೆಗೆ ಮೋದಿ ಧನ್ಯವಾದ ಸಲ್ಲಿಸಿದ್ದಾರೆ. ಇದು ನಮಗೆ ನೀಡಿದ ಹೊಸ ಜವಾಬ್ಧಾರಿಯಾಗಿದೆ. ಮುಂದಿನ ದಿನಗಳಲ್ಲಿ ಬಿಹಾರದಲ್ಲಿ ಉದ್ಯೋಗ ಹೆಚ್ಚಲಿದೆ. ಬಿಹಾರಿಗಳು ಉದ್ಯೋಗಕ್ಕಾಗಿ ಬೇರೆ ರಾಜ್ಯಗಳಿಗೆ ಹೋಗಬೇಕಾಗಿಲ್ಲ. ಬಿಹಾರದಲ್ಲೇ ಮನೆ ಕಟ್ಟಿಕೊಳ್ಳಬಹುದು ಎಂದು ಮೋದಿ ಭರವಸೆ ನೀಡಿದ್ದಾರೆ.
ಇನ್ನು, ಗೆಲುವಿಗಾಗಿ ಶ್ರಮಿಸಿದ ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸಿರುವ ಮೋದಿ, ನಿಮ್ಮ ಮುಂದೆ ಇನ್ನು ನಾಲ್ಕು ಗುರಿಯಿದೆ ಎಂದಿದ್ದಾರೆ. ತಮಿಳುನಾಡು, ಪಾಂಡಿಚೇರಿ, ಕೇರಳ ಮತ್ತು ಪಶ್ಚಿಮ ಬಂಗಾಲದಲ್ಲೂ ಗೂಂಡಾ ಆಡಳಿತವನ್ನು ಕೊನೆಗಾಣಿಸುವ ಸವಾಲು ನಿಮ್ಮ ಮುಂದಿದೆ ಎಂದಿದ್ದಾರೆ. ಈ ರಾಜ್ಯಗಳ ಚುನಾವಣೆ ಸದ್ಯದಲ್ಲೇ ಇದ್ದು, ಇಲ್ಲಿಯೂ ಇದೇ ಉತ್ಸಾಹದಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.