ಪಟ್ನಾ: ಬಿಹಾರ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇದೆ. ಈ ಮಧ್ಯೆ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜ್ಯದ ಮತದಾರರನ್ನು ಸೆಳೆಯಲು ದೊಡ್ಡ ಘೋಷಣೆ ಮಾಡಿದ್ದಾರೆ.
ಇದೇ ಆಗಸ್ಟ್ 1ರಿಂದ ರಾಜ್ಯದ ಎಲ್ಲ ಗೃಹ ಬಳಕೆದಾರರಿಗೆ 125 ಯೂನಿಟ್‌ಗಳವರೆಗಿನ ವಿದ್ಯುತ್ ಉಚಿತವಾಗಿ ನೀಡಲಾಗುವುದು ಎಂದು ನಿತೀಶ್ ಕುಮಾರ್ ಘೋಷಿಸಿದ್ದಾರೆ.
ನಾವು ಆರಂಭದಿಂದಲೂ ಕೈಗೆಟುಕುವ ದರದಲ್ಲಿ ಎಲ್ಲರಿಗೂ ವಿದ್ಯುತ್ ಒದಗಿಸುತ್ತಿದ್ದೇವೆ. ಇದೀಗ ರಾಜ್ಯದ ಎಲ್ಲ ಗೃಹ ಬಳಕೆದಾರರಿಗೆ 125 ಯೂನಿಟ್‌ಗಳವರೆಗಿನ ವಿದ್ಯುತ್‌ಗೆ ಯಾವುದೇ ಶುಲ್ಕ ಇರುವುದಿಲ್ಲ ಎಂದು ಬರೆದಿದ್ದಾರೆ. ಈ ಯೋಜನೆಯಿಂದ ರಾಜ್ಯದ 1.67 ಕೋಟಿ ಕುಟುಂಬಗಳಿಗೆ ಪ್ರಯೋಜನವಾಗಲಿದೆ ಎಂದು ನಿತೀಶ್ ಕುಮಾರ್ ಎಕ್ಸ್‌ನಲ್ಲಿ ತಿಳಿಸಿದ್ದಾರೆ.
ಈ ಘೋಷಣೆಗೆ ಮುನ್ನ ಮಂಗಳವಾರ ನಿತೀಶ್ ಕುಮಾರ್ 30 ಪ್ರಮುಖ ಪ್ರಸ್ತಾಪಗಳಿಗೆ ಅನುಮೋದನೆ ನೀಡಿದ್ದರು, ಇದರಲ್ಲಿ ಮುಂದಿನ ಐದು ವರ್ಷಗಳಲ್ಲಿ ಒಂದು ಕೋಟಿ ಯುವಕರಿಗೆ ಉದ್ಯೋಗ ಒದಗಿಸುವ ಯೋಜನೆಯೂ ಸೇರಿದೆ. ಈ ವರ್ಷಾಂತ್ಯದಲ್ಲಿ ನಡೆಯಲಿರುವ ರಾಜ್ಯ ಚುನಾವಣೆಗೆ ಮುಂಚಿತವಾಗಿ ಪ್ರಮುಖ ನಿರ್ಧಾರಗಳನ್ನು ಆಢಳಿತರೂಢ ಎನ್‌ಡಿಎ ತೆಗೆದುಕೊಳ್ಳುತ್ತಿದೆ.