ಮ್ಯಾಂಚೆಸ್ಟರ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಮುನ್ನ ಟೀಂ ಇಂಡಿಯಾದಲ್ಲಿ ಗಾಯಾಳುಗಳ ಸಂಖ್ಯೆ ಹೆಚ್ಚುತ್ತಿರುವುದು ಚಿಂತೆಗೆ ಕಾರಣವಾಗಿದೆ. ಅರ್ಷ್ ದೀಪ್ ಸಿಂಗ್, ಆಕಾಶ್ ದೀಪ್ ಬಳಿಕ ಈಗ ಮತ್ತೊಬ್ಬ ಸ್ಟಾರ್ ಆಟಗಾರನಿಗೆ ಗಾಯವಾದ ಬಗ್ಗೆ ವರದಿಯಾಗಿದೆ.
ನಾಲ್ಕನೇ ಪಂದ್ಯವನ್ನು ಟೀಂ ಇಂಡಿಯಾ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಈ ನಡುವೆ ಅರ್ಷ್ ದೀಪ್ ಸಿಂಗ್ ಕೈಗೆ ಗಾಯ ಮಾಡಿಕೊಂಡಿದ್ದರೆ ಆಕಾಶ್ ದೀಪ್ ತೊಡೆ ನೋವಿನಿಂದ ಬಳಲುತ್ತಿದ್ದಾರೆ. ರಿಷಭ್ ಪಂತ್ ಕೈ ಬೆರಳಿಗೆ ಗಾಯ ಮಾಡಿಕೊಂಡಿದ್ದು ಕೀಪಿಂಗ್ ಮಾಡುವುದು ಅನುಮಾನವಾಗಿದೆ.
ಇದರ ನಡುವೆ ನಿತೀಶ್ ಕುಮಾರ್ ರೆಡ್ಡಿಗೂ ಗಾಯವಾದ ಬಗ್ಗೆ ವರದಿಯಾಗಿದೆ. ನಿನ್ನೆ ನೆಟ್ ಪ್ರಾಕ್ಟೀಸ್ ವೇಳೆ ನಿತೀಶ್ ಕುಮಾರ್ ರೆಡ್ಡಿ ಕೂಡಾ ಮಂಡಿ ನೋವಿಗೊಳಗಾಗಿದ್ದಾರೆ. ಈ ಸರಣಿಯಲ್ಲಿ ಅವರು ಬ್ಯಾಟಿಂಗ್ ನಿಂದ ಹೆಚ್ಚು ಸದ್ದು ಮಾಡದೇ ಇದ್ದರೂ ಬೌಲಿಂಗ್ ನಲ್ಲಿ ತಂಡಕ್ಕೆ ಆಪತ್ ಬಾಂಧವನಾಗಿದ್ದರು.
ಆದರೆ ಈಗ ಅವರೂ ಹೊರಗುಳಿಯುತ್ತಿರುವುದು ತಂಡಕ್ಕೆ ದೊಡ್ಡ ತಲೆನೋವಾಗಿದೆ. ಇದೀಗ ತಂಡಕ್ಕೆ ವೇಗಿ ಅಂಶುಲ್ ಅವರನ್ನು ಸೇರ್ಪಡೆಗೊಳಿಸಲಾಗಿದೆ. ಆದರೆ ಪ್ರಮುಖ ಆಟಗಾರರೆಲ್ಲಾ ಗಾಯಗೊಂಡಿರುವುದು ತಂಡಕ್ಕೆ ದೊಡ್ಡ ಹೊಡೆತವಾಗಿದೆ.