ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದ ವೇಳೆ ಕೈ ಬೆರಳಿಗೆ ಗಾಯ ಮಾಡಿಕೊಂಡಿದ್ದ ವಿಕೆಟ್ ಕೀಪರ್ ರಿಷಭ್ ಪಂತ್ ನಾಲ್ಕನೇ ಪಂದ್ಯದಲ್ಲಿ ಆಡ್ತಾರಾ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನ ಕೀಪಿಂಗ್ ಮಾಡುವಾಗ ರಿಷಭ್ ಪಂತ್ ಕೈ ಬೆರಳಿಗೆ ಗಾಯವಾಗಿತ್ತು. ಕೆಲವು ಕ್ಷಣಗಳ ನಂತರ ಅವರು ಮೈದಾನ ತೊರೆದಿದ್ದರು. ವೈದ್ಯಕೀಯ ತಂಡ ಅವರ ಮೇಲೆ ನಿಗಾ ಇರಿಸಿತ್ತು. ಇದಾದ ಬಳಿಕ ಅವರು ಇಡೀ ಪಂದ್ಯದಲ್ಲಿ ವಿಕೆಟ್ ಕೀಪಿಂಗ್ ಮಾಡಿರಲಿಲ್ಲ.
ಅವರ ಸ್ಥಾನದಲ್ಲಿ ಧ್ರುವ್ ಜ್ಯುರೆಲ್ ಕೀಪಿಂಗ್ ಮಾಡಿದ್ದರು. ಆದರೆ ಬ್ಯಾಟಿಂಗ್ ಗೆ ಮಾತ್ರ ನೋವು ನಿವಾರಕ ನುಂಗಿ ಆಡಲಿಳಿದಿದ್ದರು. ಇದೀಗ ನಾಲ್ಕನೇ ಪಂದ್ಯಕ್ಕೆ ಅವರು ಲಭ್ಯರಿರುತ್ತಾರಾ ಎಂಬ ಅನುಮಾನ ಎಲ್ಲರಲ್ಲಿದೆ. ಯಾಕೆಂದರೆ ರಿಷಭ್ ಟೆಸ್ಟ್ ಮಾದರಿಯಲ್ಲಿ ಭಾರತಕ್ಕೆ ಉಪಯುಕ್ತ ಬ್ಯಾಟಿಗ. ಅವರ ಅನುಪಸ್ಥಿತಿ ತಂಡಕ್ಕೆ ದೊಡ್ಡ ಹೊಡೆತ ನೀಡಲಿದೆ.
ರಿಷಭ್ ಮುಂದಿನ ಪಂದ್ಯಕ್ಕೆ ಲಭ್ಯರಾಗುವ ಬಗ್ಗೆ ನಾಯಕ ಶುಭಮನ್ ಗಿಲ್ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. ರಿಷಭ್ ಗಾಯವನ್ನು ವೈದ್ಯಕೀಯ ತಂಡ ಪರಿಶೀಲಿಸಿದೆ. ಈ ವೇಳೆ ದೊಡ್ಡ ಗಾಯವಲ್ಲ ಎಂದು ತಿಳಿದುಬಂದಿದೆ. ಹೀಗಾಗಿ ಮುಂದಿನ ಪಂದ್ಯಕ್ಕೆ ಅವರು ಚೇತರಿಸಿಕೊಳ್ಳುವ ವಿಶ್ವಾಸವಿದೆ ಎಂದಿದ್ದಾರೆ. ಜುಲೈ 23 ರಿಂದ ನಾಲ್ಕನೇ ಟೆಸ್ಟ್ ಪಂದ್ಯ ಆರಂಭವಾಗಲಿದ್ದು ಈ ವೇಳೆ ರಿಷಭ್ ಚೇತರಿಸಿಕೊಳ್ಳುವ ಸಾಧ್ಯತೆಯಿದೆ.