ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್ ಸೂಚನೆ ಮೇರೆಗೆ ಕರ್ನಾಟಕ ಸರ್ಕಾರ ಮತ್ತೊಮ್ಮೆ ಜಾತಿ ಸಮೀಕ್ಷೆಗೆ ಮುಂದಾಗಿದೆ. ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7 ರವರೆಗೆ ಜಾತಿಗಣತಿ ನಡೆಯಲಿದೆ. ಈ ವೇಳೆ ಯಾವೆಲ್ಲಾ ದಾಖಲೆ, ಮಾಹಿತಿ ನೀಡಬೇಕು ಇಲ್ಲಿದೆ ವಿವರ.
ಜಾತಿಗಣತಿಗೆ ಶಿಕ್ಷಕರನ್ನು ನಿಯೋಜಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಇಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. 2 ಕೋಟಿ ಮನೆಗೆ ಸ್ಟಿಕ್ಕರ್ ಅಂಟಿಸಲಾಗುವುದು. ಶಿಕ್ಷಕರು ಮನೆ ಮನೆಗೂ ಭೇಟಿ ನೀಡಿ ನಿಮ್ಮ ಸಾಮಾಜಿಕ, ಶಿಕ್ಷಣ, ಧರ್ಮ, ಜಮೀನು ಸೇರಿದಂತೆ ಒಟ್ಟು 60 ಪ್ರಶ್ನೆಗಳನ್ನು ಕೇಳಲಿದ್ದಾರೆ. ಅವುಗಳ ಮಾಹಿತಿ ನೀಡಬೇಕಾಗುತ್ತದೆ.
ಗಣತಿ ವೇಳೆ ನಿಮ್ಮ ಆಧಾರ್ ಕಾರ್ಡ್, ಪಡಿತರ ಚೀಟಿ ನೀಡಬೇಕು. ನಿಮ್ಮ ಮೊಬೈಲ್ ನಂಬರ್ ನೀಡಬೇಕಾಗುತ್ತದೆ. ಮೊಬೈಲ್ ನಂಬರ್ ನ್ನೂ ಲಿಂಕ್ ಮಾಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಗಣತಿ ವೇಳೆ ಮನೆಯಲ್ಲಿ ಇಲ್ಲದೇ ಇದ್ದರೆ ಸಹಾಯವಾಣಿ ಸಂಖ್ಯೆ 80507 70004 ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದು. ಇಲ್ಲವೇ kacbckarnataka.govt.in ವೆಬ್ ಸೈಟ್ ಮೂಲಕ ಮಾಹಿತಿ ನೀಡಬಹುದು ಎಂದು ಸಿಎಂ ಮಾಹಿತಿ ನೀಡಿದ್ದಾರೆ.