ಬೆಂಗಳೂರು: ಕನ್ನಡ ಚಿತ್ರರಂಗದ ಅಭಿನವ ಭಾರ್ಗವ ಸಾಹಸಸಿಂಹ ಡಾ ವಿಷ್ಣುವರ್ಧನ್ ಮತ್ತು ಹಿರಿಯ ನಟಿ ಬಿ ಸರೋಜಾದೇವಿಗೆ ನಿನ್ನೆ ರಾಜ್ಯ ಸರ್ಕಾರ ಕರ್ನಾಟಕ ಪ್ರಶಸ್ತಿ ಘೋಷಣೆ ಮಾಡಿತ್ತು. ಕರ್ನಾಟಕ ರತ್ನ ನೀಡಿದ ಬಳಿಕವೂ ಈ ಹಿರಿಯ ನಟಿಯರು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಮರೆಯದೇ ಭೇಟಿ ಮಾಡಿದ್ದಾರೆ.
ವಿಷ್ಣುವರ್ಧನ್ ಮತ್ತು ಸರೋಜಾದೇವಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು ಎಂದು ಶ್ರಮಿಸಿದವರಲ್ಲಿ ಹಿರಿಯ ನಟಿಯರಾದ ಜಯಮಾಲ, ಶ್ರುತಿ ಕೃಷ್ಣ ಮತ್ತು ಮಾಳವಿಕಾ ಅವಿನಾಶ್ ಕೂಡಾ ಒಬ್ಬರು. ವಿಷ್ಣುವರ್ಧನ್ ಕುಟುಂಬಸ್ಥರ ಜೊತೆಗೆ ಈ ನಟಿಯರೂ ಸಿಎಂ ಮತ್ತು ಡಿಸಿಎಂ ಭೇಟಿಯಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಮನವಿ ಮಾಡಿದ್ದರು.
ಕರ್ನಾಟಕ ರತ್ನ ನೀಡುವವರೆಗೂ ನಮ್ಮ ಪ್ರಯತ್ನ ಮುಂದುವರಿಸುತ್ತೇವೆ ಎಂದು ಈ ನಟಿಯರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಆದರೆ ರಾಜ್ಯ ಸರ್ಕಾರ ನಿನ್ನೆ ಕೊನೆಗೂ ಕರ್ನಾಟಕ ರತ್ನ ಘೋಷಣೆ ಮಾಡಿದೆ.
ಇದರಿಂದ ಖುಷಿಯಾಗಿರುವ ನಟಿಯರು ಮತ್ತೆ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಶಾಲು ಹೊದೆಸಿ ಸನ್ಮಾನಿಸಿ ತಮ್ಮ ಕೃತಜ್ಞತೆ ಮತ್ತು ಖುಷಿ ವ್ಯಕ್ತಪಡಿಸಿದ್ದಾರೆ.