ಬೆಂಗಳೂರು: ಸಾಹಸಸಿಂಹ ಡಾ ವಿಷ್ಣುವರ್ಧನ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಬಗ್ಗೆ ವಿಷ್ಣುವರ್ಧನ್ ಅಳಿಯ, ನಟ ಅನಿರುದ್ಧ ಜತಕರ ವೆಬ್ ದುನಿಯಾಗೆ ಪ್ರತಿಕ್ರಿಯಸಿದ್ದಾರೆ.
ಡಾ ವಿಷ್ಣುವರ್ಧನ್ ಮತ್ತು ಹಿರಿಯ ನಟಿ ಬಿ ಸರೋಜಾದೇವಿಯವರಿಗೆ ಇಂದು ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಈ ಮೊದಲು ಚಿತ್ರರಂಗದಿಂದ ಡಾ ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಅವರಿಗೆ ಮಾತ್ರ ಕರ್ನಾಟಕ ರತ್ನ ನೀಡಲಾಗಿತ್ತು.
ಇದೀಗ ಚಿತ್ರರಂಗಕ್ಕೆ ಅಪಾರ ಕೊಡುಗೆ ಸಲ್ಲಿಸಿದ ಡಾ ವಿಷ್ಣುವರ್ಧನ್ ಮತ್ತು ಬಿ ಸರೋಜಾದೇವಿಯವರಿಗೆ ಕರ್ನಾಟಕ ರತ್ನ ಗೌರವ ಸಲ್ಲಿಸಲಾಗಿದೆ. ವಿಷ್ಣುವರ್ಧನ್ 75 ನೇ ಜನ್ಮ ಜಯಂತಿಗೆ ವಾರಕ್ಕೆ ಮೊದಲು ಈ ಗೌರವ ಸಿಕ್ಕಿರುವುದು ಅವರ ಅಭಿಮಾನಿಗಳ ಖುಷಿ ಮೇರೆ ಮೀರಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅನಿರುದ್ಧ ಜತಕರ ಬಹಳ ಖುಷಿಯಾಗ್ತಿದೆ. ಇದು ನಮ್ಮತನವನ್ನು ನಾವು ಗೌರವಿಸಿದ ಹಾಗೆ. ನಮ್ಮ ಸಾಧಕರನ್ನು ಗೌರವಿಸುವುದು ನಮ್ಮ ಜವಾಬ್ಧಾರಿ. ಅದನ್ನು ಈಗ ನಮ್ಮ ಕರ್ನಾಟಕ ಸರ್ಕಾರ ಮಾಡಿದೆ. ಅದಕ್ಕೆ ನಾನು ನಮ್ಮ ವೈಯಕ್ತಿಕ ಕುಟುಂಬ ಮತ್ತು ಬೃಹತ್ ಕುಟುಂಬ ಅಂದರೆ ನಮ್ಮ ಕನ್ನಡಿಗರ ಪರವಾಗಿ ಮಾನ್ಯ ಮುಖ್ಯಮಂತ್ರಿಗಳಿಗೆ, ಇದಕ್ಕಾಗಿ ಶ್ರಮಿಸಿದ ಕನ್ನಡಿಗರಿಗೆ, ಕನ್ನಡ ಚಿತ್ರರಂಗಕ್ಕೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಅನಿರುದ್ಧ ಅವರು ಧನ್ಯವಾದ ಸಲ್ಲಿಸಿದ್ದಾರೆ.