ಬೆಂಗಳೂರು: ಅಭಿಮಾನ್ ಸ್ಟುಡಿಯೋದಲ್ಲಿದ್ದ ಸಾಹಸಸಿಂಹ ಡಾ ವಿಷ್ಣುವರ್ಧನ್ ಸಮಾಧಿ ನೆಲಸಮ ಮಾಡಿರುವ ಬಗ್ಗೆ ಕೊನೆಗೂ ಕುಟುಂಬಸ್ಥರು ಮಹತ್ವದ ತೀರ್ಮಾನಕ್ಕೆ ಬಂದಿದ್ದಾರೆ. ಈ ಬಗ್ಗೆ ಇಂದು ಸ್ವತಃ ವಿಷ್ಣುವರ್ಧನ್ ಅಳಿಯ, ನಟ ಅನಿರುದ್ಧ್ ಜತ್ಕರ್ ಅಭಿಮಾನಿಗಳಿಗೆ ಮತ್ತು ಮಾಧ್ಯಮಗಳಿಗೆ ವಿಡಿಯೋ ಮುಖಾಂತರ ವಿಶೇಷ ಮನವಿ ಮಾಡಿದ್ದಾರೆ.
ಬಾಲಣ್ಣ ಕುಟುಂಬಸ್ಥರಿಗೆ ಸೇರಿದ ಅಭಿಮಾನ್ ಸ್ಟುಡಿಯೋ ಜಾಗದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಸಮಾಧಿಯಿತ್ತು. ಆದರೆ ಇದು ಸಾಕಷ್ಟು ವಿವಾದಕ್ಕೊಳಗಾಗಿ ಕೊನೆಗೆ ಬೇಸತ್ತ ವಿಷ್ಣುವರ್ಧನ್ ಕುಟುಂಬಸ್ಥರು ಅಲ್ಲಿಂದ ಅಸ್ಥಿ ತೆಗೆದುಕೊಂಡು ಮೈಸೂರಿನಲ್ಲಿ ಸರ್ಕಾರದ ಸಹಯೋಗದೊಂದಿಗೆ ಸ್ಮಾರಕ ನಿರ್ಮಿಸಿದ್ದಾರೆ.
ಆದರೆ ಅಭಿಮಾನಿಗಳು ಈಗಲೂ ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣುವರ್ಧನ್ ಸಮಾಧಿಗೆ ಬಂದು ಪೂಜೆ ಸಲ್ಲಿಸುತ್ತಲೇ ಇದ್ದರು. ಆದರೆ ಮೊನ್ನೆಯಷ್ಟೇ ಕೋರ್ಟ್ ನಿಂದ ಆದೇಶ ತಂದು ಬಾಲಣ್ಣ ಕುಟುಂಬಸ್ಥರು ವಿಷ್ಣುವರ್ಧನ್ ಸಮಾಧಿ ನೆಲಸಮ ಮಾಡಿದ್ದಾರೆ. ಇದು ವಿಷ್ಣುವರ್ಧನ್ ಅಭಿಮಾನಿಗಳಿಗೆ ತೀವ್ರ ಬೇಸರ ತರಿಸಿತ್ತು. ಜೀವಂತವಿದ್ದಾಗಲೂ ಸಾಕಷ್ಟು ಅಪಮಾನ ಮಾಡಲಾಯಿತು. ಈಗ ಸತ್ತ ಮೇಲೂ ಇಂತಹಾ ಮೇರು ನಟನ ಸಮಾಧಿ ಕೆಡವಿ ಅವಮಾನ ಮಾಡಲಾಗುತ್ತಿದೆ ಎಂದು ಅವರ ಅಭಿಮಾನಿಗಳು ದುಃಖಿಸಿದ್ದರು.
ಕುಟುಂಬಸ್ಥರು ಏನೂ ಮಾಡಲಿಲ್ಲ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ ಅನಿರುದ್ಧ ಮೊನ್ನೆಯಷ್ಟೇ ಪತ್ರಿಕಾಗೋಷ್ಠಿ ಕರೆದು ನಮಗೂ ಈ ವಿಚಾರದಲ್ಲಿ ತುಂಬಾ ನೋವಿದೆ. ನಾವು ಇಲ್ಲಿ ಸ್ಮಾರಕ ನಿರ್ಮಾಣಕ್ಕೆ ಸಾಕಷ್ಟು ಹೋರಾಟ ಮಾಡಿದ್ದೆವು. ಆದರೆ ಆಗಲಿಲ್ಲ ಎಂದಾಗ ಮೈಸೂರಿಗೆ ಹೋದೆವು. ನಮ್ಮ ಹೋರಾಟ ಏನೆಂದು ವಿಷ್ಣುವರ್ಧನ್ ಅವರ ನಿಜವಾದ ಅಭಿಮಾನಿಗಳಿಗೆ ಗೊತ್ತಿದೆ. ಸಮಾಧಿ ನೆಲಸಮ ಮಾಡುವ ವಿಚಾರ ನಮಗೂ ಮೊದಲೇ ಗೊತ್ತಿರಲಿಲ್ಲ. ಈ ವಿಚಾರದಲ್ಲಿ ಕುಟುಂಬಸ್ಥರನ್ನು ದೂಷಿಸಬೇಡಿ ಎಂದಿದ್ದರು.
ಇದೀಗ ಮತ್ತೆ ವಿಡಿಯೋ ಸಂದೇಶವೊಂದನ್ನು ಕಳುಹಿಸಿರುವ ನಟ ಅನಿರುದ್ಧ್ ಇದೇ ಭಾನುವಾರ ಅಂದರೆ ಆಗಸ್ಟ್ 17 ರಂದು ಸಾಹಸಸಿಂಹ ವಿಷ್ಣುವರ್ಧನ್ ಅವರ ಜಯನಗರದ ನಿವಾಸದಲ್ಲಿ ಬೆಳಿಗ್ಗೆ 11 ಗಂಟೆಗೆ ಅಭಿಮಾನಿಗಳನ್ನು ಆಹ್ವಾನಿಸಿದ್ದಾರೆ. ಈ ದಿನ ಸಮಾಧಿ ನೆಲಸಮ ಮಾಡಿರುವ ಬಗ್ಗೆ ಮತ್ತು ಪರಿಹಾರದ ಬಗ್ಗೆ ಚರ್ಚೆ ಮಾಡೋಣ. ವಿಷ್ಣುವರ್ಧನ್ ಅವರ ನಿಜವಾದ ಅಭಿಮಾನಿಗಳು ಈ ಸಭೆಗೆ ಬನ್ನಿ. ಆದರೆ ಮುಖವಾಡ ಹೊತ್ತುಕೊಂಡು ನಮ್ಮ ಕುಟುಂಬಕ್ಕೆ ಮಸಿ ಬಳಿಯುವವರು ದಯವಿಟ್ಟು ಬರಬೇಡಿ. ಸಮಾಧಿ ನೆಲಸಮ ಬಗ್ಗೆ ಚರ್ಚೆ ಮಾಡೋಣ ಎಂದು ಆಹ್ವಾನಿಸಿದ್ದಾರೆ. ಅವರು ಏನು ಹೇಳಿದ್ದಾರೆ ಇಲ್ಲಿದೆ ನೋಡಿ ವಿಡಿಯೋ.