ಬೆಂಗಳೂರು: ಸಾಹಸಸಿಂಹ ಡಾ ವಿಷ್ಣುವರ್ಧನ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕೆಂದು ಅವರ ಅಳಿಯ, ನಟ ಅನಿರುದ್ಧ ಜತ್ಕರ್ ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ಕನ್ನಡ ಚಲನಚಿತ್ರ ರಂಗಕ್ಕೂ ಮತ್ತು ರಾಜ್ಯದ ಸಾಂಸ್ಕೃತಿಕ ಪರಂಪರೆಗೆ ಅವರು ನೀಡಿದ ಕೊಡುಗೆ ಅಪರೂಪ ಮತ್ತು ಅಪಾರ. ಅವರು ತಮ್ಮ ಸಾಮಾಜಿಕ ಜವಾಬ್ಧಾರಿಯನ್ನು ನಿಭಾಯಿಸಿದ ರೀತಿ ಕೂಡಾ ಅನೇಕರಿಗೆ ಪ್ರೇರಣೆ.
ಅವರು ಭೌತಿಕವಾಗಿ ನಮ್ಮನ್ನು ಅಗಲಿ 15 ವರ್ಷಗಳೇ ದಾಟಿದರೂ ಜನರ ಹೃದಯದಲ್ಲಿ ಅವರು ಹೊಂದಿರುವ ಸ್ಥಾನ ಮಾತ್ರ ಅಚಲವಾಗಿದೆ. ಇದುವರೆಗೆ ಅವರಿಗೆ ಭಾರತ ಸರ್ಕಾರದಿಂದ ಪದ್ಮ ಶ್ರೀ ಪ್ರಶಸ್ತಿ ಕೂಡಾ ಬಂದಿಲ್ಲ. ನಮ್ಮ ರಾಜ್ಯದ ಅತ್ಯುನ್ನತ ಪ್ರಶಸ್ತಿಯಾದ ಕರ್ನಾಟಕ ರತ್ನ ಪ್ರಶಸ್ತಿಯೂ ಮರಣೋತ್ತರವಾಗಿಯೂ ಅವರಿಗೆ ಲಭಿಸಿಲ್ಲ ಎಂಬುದು ವಿಷಾಧನೀಯ.
ಈ ವರ್ಷದ ಸೆಪ್ಟೆಂಬರ್ 18 ರಂದು ಅವರ 75 ನೇ ಜನ್ಮ ವಾರ್ಷಿಕೋತ್ಸವವಿದೆ. ಈ ವಿಶೇಷ ಸಂದರ್ಭದಲ್ಲಿ ಅವರ ಅಪಾರ ಸಾಧನೆ ಗೌರವಿಸಿ, ಅಭಿಮಾನಿಗಳ ಹಿತೈಷಿಗಳ ಇಚ್ಛೆ ಈಡೇರಿಸುವಂತೆ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಬೇಕೆಂದು ಮನವಿ ಇದಾಗಿದೆ ಎಂದು ಅನಿರುದ್ಧ್ ಜತ್ಕರ್ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಸಾಹಸಸಿಂಹ ವಿಷ್ಣುವರ್ಧನ್ ಅವರಿಗೆ ಕರ್ನಾಟಕ ಪ್ರಶಸ್ತಿ, ಪದ್ಮ ಪ್ರಶಸ್ತಿ ನೀಡಬೇಕು ಎಂಬುದು ಅವರ ಅಸಂಖ್ಯಾತ ಅಭಿಮಾನಿಗಳ ಬಹುದಿನಗಳ ಬೇಡಿಕೆಯಾಗಿತ್ತು. ಈಗಲಾದರೂ ಸರ್ಕಾರ ಈ ಬೇಡಿಕೆಯನ್ನು ಈಡೇರಿಸುತ್ತಾ ನೋಡಬೇಕಿದೆ.