ಬೆಂಗಳೂರು: ಜನದ ಮಧ್ಯೆ ಕೋಮುಭಾವನೆ ಕೆರಳಿಸಿ, ಬೆಂಕಿ ಹಚ್ಚುವುದೇ ಬಿಜೆಪಿ ನಾಯಕರ ಕಾಯಕ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.
ಬಿಜೆಪಿಯವರಿಗೆ ರಾಜಕಾರಣ ಮಾಡುವುದು ಬಿಟ್ಟು ಬೇರೆ ಕೆಲಸ ಏನಿದೆ. ಅವರು ದೆಹಲಿಗೆ ಹೋಗಿ ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲು, ನರೇಗಾ ಅನುದಾನ, ಮೇಕೆದಾಟು, ಮಹದಾಯಿ ನೀರಾವರಿ ಯೋಜನೆಗಳಿಗೆ ಅನುಮತಿ ತೆಗೆದುಕೊಂಡು ಬರಲಿ ಎಂದು ಸವಾಲೆಸೆದರು.
ಮದ್ದೂರು ಪ್ರಕರಣದ ಬಗ್ಗೆ ಈಗಾಗಲೇ ಸಿಎಂ, ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ. ಹೊರ ರಾಜ್ಯಕ್ಕೆ ಹೋಗಿದ್ದ ಹಿನ್ನೆಲೆಯಲ್ಲಿ ನನಗೆ ಈ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ನನಗೆ ಸಂಪೂರ್ಣ ಮಾಹಿತಿ ಸಿಗದೇ ಈ ವಿಚಾರದಲ್ಲಿ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತಿಳಿಸಿದರು.
ಸತೀಶ್ ಸೈಲ್ ಅವರ ಬಂಧನದ ಅವಶ್ಯಕತೆ ಇರಲಿಲ್ಲ. ಈ ಪ್ರಕರಣದ ವಿಚಾರಣೆ 2010ರಿಂದಲೇ ನಡೆಯುತ್ತಿದೆ. ಕಾಂಗ್ರೆಸ್ ಶಾಸಕರ ಮೇಲೆ ಮಾತ್ರ ಗುರಿಯಾಗಿಸಿ ಇಂತಹ ದಾಳಿಗಳು ನಡೆಯುತ್ತಿವೆ. ಆ ಮೂಲಕ ಕಾಂಗ್ರೆಸ್ ನಾಯಕರಿಗೆ ತೊಂದರೆ ನೀಡುವ ಕೆಲಸ ನಡೆಯುತ್ತಿದೆ ಎಂದು ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರ ಬಂಧನದ ವಿಚಾರವಾಗಿ ಪ್ರತಿಕ್ರಿಯಿಸಿದರು.