ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬ್ರಿಟಿಷ್ ನಾಗರಿಕ ಎಂದು ಅಲಹಾಬಾದ್ ಹೈಕೋರ್ಟ್‌ನಲ್ಲಿ ಪ್ರತಿಪಾದಿಸಿದ್ದ ಕರ್ನಾಟಕದ ಬಿಜೆಪಿ ಕಾರ್ಯಕರ್ತ ಎಸ್. ವಿಘ್ನೇಶ್ ಶಿಶಿರ್ ಅವರು ಇಂದು ಇಡಿ ಮುಂದೆ ತಮ್ಮ ಹೇಳಿಕೆ ದಾಖಲಿಸಿದ್ದಾರೆ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ.
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಸೆಕ್ಷನ್ 37ರ ಅಡಿಯಲ್ಲಿ ದೆಹಲಿಯಲ್ಲಿರುವ ತನಿಖಾ ಸಂಸ್ಥೆ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ವಿಷ್ನೇಶ್ ಅವರಿಗೆ ನೋಟಿಸ್ ನೀಡಲಾಗಿತ್ತು.
ಈ ಹಿನ್ನೆಲೆ ರಾಹುಲ್ ಗಾಂಧಿ ಅವರು ಬ್ರಿಟಿಷ್ ಪ್ರಜೆ ಎಂಬುದರ ಕುರಿತು ಹೊಂದಿರುವ ದಾಖಲೆ ಹಾಗೂ ಸಾಕ್ಷ್ಯಗಳನ್ನು ನೀಡುವಂತೆ ಅವರಿಗೆ ಸೂಚಿಸಲಾಗಿದೆ.
ಈ ಸಂಬಂಧ ಹಲವು ಪ್ರಶ್ನೆಗಳನ್ನು ಕೇಳಿ, ಫೆಮಾ ಕಾಯ್ದೆ ಅಡಿಯಲ್ಲಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ ಎಂದು ಗೊತ್ತಾಗಿದೆ.
ನನ್ನ ಬಳಿ ಬಲವಾದ ಸಾಕ್ಷ್ಯ, ಮಾಹಿತಿ, ದಾಖಲೆಗಳಿವೆ ಎಂದು ವಿಘ್ನೇಶ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ವಿಚಾರವಾಗಿ ಇದುವರೆಗೆ ಪಕ್ಷವು ಯಾವುದೇ ಹೇಳಿಕೆಯನ್ನು ನೀಡಿಲ್ಲ.