Select Your Language

Notifications

webdunia
webdunia
webdunia
webdunia

ಎರಡು ಕೋಟಿ ಅನುದಾನಕ್ಕೆ ಅಂಗಲಾಚಬೇಕು, ಇನ್ನೆಷ್ಟು ದಿನ ಈ ಭಂಡ ಬಾಳು: ಆರ್ ಅಶೋಕ

R Ashok

Krishnaveni K

ಬೆಂಗಳೂರು , ಶನಿವಾರ, 6 ಸೆಪ್ಟಂಬರ್ 2025 (11:18 IST)
ಬೆಂಗಳೂರು: ಎರಡು ಕೋಟಿ ರೂ ಅನುದಾನ ಪಡೆಯಲು ರಾಜ್ಯದ ಕೃಷಿ ಸಚಿವರೆನಿಸಿಕೊಂಡವರು ಮುಖ್ಯಮಂತ್ರಿ ಬಳಿ ಅಂಗಲಾಚಬೇಕು, ಸಿದ್ದರಾಮಯ್ಯನವರೇ ಇನ್ನೆಷ್ಟು ದಿನ  ಈ ಭಂಡ ಬಾಳು ಎಂದು ವಿಪಕ್ಷ ನಾಯಕ ಆರ್ ಅಶೋಕ್ ವ್ಯಂಗ್ಯ ಮಾಡಿದ್ದಾರೆ.

ತಮ್ಮ ಕ್ಷೇತ್ರದ ಅನುದಾನಕ್ಕಾಗಿ ಕೃಷಿ ಸಚಿವ ಚೆಲುವರಾಯಸ್ವಾಮಿ ಸಿಎಂಗೆ ಮನವಿ ಪತ್ರ ನೀಡಿರುವ ವಿಚಾರವಾಗಿ ಅಶೋಕ್ ಸೋಷಿಯಲ್ ಮೀಡಿಯಾ ಎಕ್ಸ್ ನಲ್ಲಿ ವ್ಯಂಗ್ಯ ಮಾಡಿದ್ದಾರೆ.

‘ರಾಜ್ಯ ಸರ್ಕಾರದ ಕೃಷಿ ಸಚಿವರು, ನಾಲ್ಕನೇ ಬಾರಿಗೆ ಶಾಸಕರಾಗಿ ಆರಿಸಿ ಬಂದಿರುವವರು ತಮ್ಮ ಕ್ಷೇತ್ರದ ಪರಿಶಿಷ್ಟ ಪಂಗಡಗಳ ಕಾಲೋನಿ ಅಭಿವೃದ್ಧಿಗೆ ಕೇವಲ 2 ಕೋಟಿ ರೂಪಾಯಿ ಅನುದಾನ ಪಡೆಯಲು ಮುಖ್ಯಮಂತ್ರಿಗಳ ಬಳಿ ಅಂಗಲಾಚಬೇಕು ಅಂದರೆ ಕಾಂಗ್ರೆಸ್ ಸರ್ಕಾರ ಎಷ್ಟು ದಿವಾಳಿ ಅನ್ನುವುದನ್ನ ನೀವೇ ಊಹಿಸಿಕೊಳ್ಳಿ.

ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಅವರು "ಅನುದಾನಕ್ಕಾಗಿ ಮುಖ್ಯಮಂತ್ರಿಗಳ ಕಾಲಿಗೆ ಬೀಳಬೇಕು" ಎನ್ನುತ್ತಾರೆ. ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರಾದ ಶ್ರೀ ಬಸವರಾಜ ರಾಯರೆಡ್ಡಿ ಅವರು "ನಿಮಗೆ ರಸ್ತೆ ಬೇಕಾದ್ರೆ ಗ್ಯಾರೆಂಟಿ ಯೋಜನೆ ಬಂದ್ ಮಾಡ್ತೀವಿ" ಎನ್ನುತ್ತಾರೆ.

ಶಾಸಕ ಗವಿಯಪ್ಪನವರಂತೂ ಪಾಪ ಒಂದು ಹೆಜ್ಜೆ ಮುಂದೆ ಹೋಗಿ "ಇದೇ ರೀತಿ ಮುಂದುವರಿದೆ ಮುಂದಿನ ದಿನಗಳಲ್ಲಿ ವಿಧಾನಸೌಧದ ಮುಂದೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ", ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಇನ್ನು ಶಾಸಕರಾದ ಬಿ.ಆರ್. ಪಾಟೀಲರು, ರಾಜು ಕಾಗೆ ಅವರು ಸೇರಿದಂತೆ ಅನೇಕ ಶಾಸಕರು ಅನುದಾನವಿಲ್ಲದೆ ತಮ್ಮ ಕ್ಷೇತ್ರಗಳಲ್ಲಿ ತಲೆ ಎತ್ತಿಕೊಂಡು ಓಡಾಡಲೂ ಆಗುತ್ತಿಲ್ಲ ಎನ್ನುವುದರ ಬಗ್ಗೆ ಸೂಪರ್ ಸಿಎಂ ಸುರ್ಜೆವಾಲಾ ಅವರಿಗೆ  ದೂರು ಕೊಟ್ಟಿರುವುದನ್ನ ಮಾಧ್ಯಮಗಳು ಬಿತ್ತರಿಸಿವೆ. ಇನ್ನೆಷ್ಟು ದಿನ ಸಿಎಂ ಸಿದ್ದರಾಮಯ್ಯನವರೇ ಈ ಭಂಡ ಬಾಳು. ರಾಜೀನಾಮೆ ಕೊಟ್ಟು ರಾಜ್ಯವನ್ನು ಉಳಿಸಿ’ ಎಂದು ವಾಗ್ದಾಳಿ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೇಕಾಬಿಟ್ಟಿ ಸುಂಕ ಹೇರಿ ಈಗ ಮೋದಿ ನನ್ನ ಫ್ರೆಂಡ್ ಎಂದ ಟ್ರಂಪ್: ಪ್ರಧಾನಿ ಪ್ರತಿಕ್ರಿಯೆ ನೋಡಿ