Select Your Language

Notifications

webdunia
webdunia
webdunia
webdunia

ಮೋದಿ ಜನಪ್ರಿಯತೆ ಸಹಿಸದೇ ಕಾಂಗ್ರೆಸ್ ಹೀಗೆಲ್ಲಾ ಮಾಡ್ತಿದೆ: ಪಿ ರಾಜೀವ್

P Rajiv

Krishnaveni K

ಬೆಂಗಳೂರು , ಶುಕ್ರವಾರ, 5 ಸೆಪ್ಟಂಬರ್ 2025 (17:46 IST)
ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಜೀ ಅವರ ಜನಪ್ರಿಯತೆಯನ್ನು ತಡೆದುಕೊಳ್ಳುವುದಕ್ಕೆ ಆಗದೆ, ಕೊನೇ ಅಸ್ತ್ರವಾಗಿ ಕಾಂಗ್ರೆಸ್ ಅಪಪ್ರಚಾರಕ್ಕೆ ಇಳಿದಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಅವರು ಆರೋಪಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ  ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ನವರಿಗೆ ಚುನಾವಣೆ ಅಕ್ರಮ ಇವಿಎಂಗಳ ಮೂಲಕ ನಡೆಯುತ್ತಿಲ್ಲ ಎಂಬುದು ಗೊತ್ತಾಗಿದೆ. ಮೋದಿಜೀ ಅವರ ಜನಪ್ರಿಯತೆಯಲ್ಲಿ ನಾವು ಚುನಾವಣೆ ಗೆಲ್ಲುವುದಕ್ಕೆ ಸಾಧ್ಯವೇ ಇಲ್ಲ ಎನ್ನುವುದು ಅವರಿಗೆ ಅರ್ಥವಾಗಿದೆ. ಹಾಗಾಗಿ ಜನರ ಮಧ್ಯೆ ಗೊಂದಲ ಸೃಷ್ಟಿ ಮಾಡಲು ಮತಗಳ್ಳತನದ ಆರೋಪವನ್ನು ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಸ್ಥಳೀಯ ಚುನಾವಣೆಗಳನ್ನು ಮತಪತ್ರಗಳ (ಬ್ಯಾಲೆಟ್ ಪೇಪರ್) ಮೂಲಕ ನಡೆಸುತ್ತೇವೆ ಎಂದು ಕಾಂಗ್ರೆಸ್ ಸರ್ಕಾರ ತೀರ್ಮಾನಿಸಿದೆ. ನರೇಂದ್ರ ಮೋದಿಜೀ ಅವರು ಜಗತ್ತಿನಲ್ಲಿ ನಡೆಯುತ್ತಿರುವ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಭಾರತ ಸವಾಲು ಒಡ್ಡುವ ರೀತಿಯಲ್ಲಿ ನಿಲ್ಲಬೇಕು ಎಂದು ಡಿಜಿಟಲ್ ಆಡಳಿತ ಮತ್ತು ಡಿಜಿಟಲ್ ವಹಿವಾಟು ಮಾಡುತ್ತಿರುವಾಗ ರಾಜ್ಯ ಸರ್ಕಾರ ಮತಪತ್ರದ ಕಡೆಗೆ ವಾಪಸ್ಸು ತಿರುಗಿ ಹೋಗುತ್ತಿದೆ ಎಂದು ಟೀಕಿಸಿದರು. ಇದರ ಹಿಂದೆ ಯಾವ ಉದ್ದೇಶವಿದೆ ಎಂದು ಪ್ರಶ್ನಿಸಿದರು. 
ಒಕ್ಕೂಟ ವ್ಯವಸ್ಥೆಯ ಒಂದು ರಾಜ್ಯದ ಮುಖ್ಯಮಂತ್ರಿ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು.  ಕೇಂದ್ರಾಡಳಿತ ಪ್ರದೇಶದ ಲೆಪ್ಟಿನೆಂಟ್ ಗವರ್ನರ್ ರೀತಿಯ ವರ್ತನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.

ಮೊದಲು ಬ್ಯಾಲೆಟ್ ಪೇಪರ್ ಇದ್ದಾಗ ನಾವು ಒಬ್ಬಬ್ಬರು 50 ವೋಟುಗಳನ್ನು ಒತ್ತಿದ್ದು ನಿಮಗೆ ಗೊತ್ತಿಲ್ಲವೇ ಗೊತ್ತಿಲ್ಲವೇ ಎಂದು ಹೇಳಿ ಡಾ. ಪರಮೇಶ್ವರ್ ಅವರು ಸ್ವತಃ ಕೇಳಿದ್ದರು ಎಂದು ನೆನಪಿಸಿದರು. ಕೊಪ್ಪಳದಲ್ಲಿ ನಾನು ಚುನಾವಣೆಗೆ ನಿಂತಾಗ ಚುನಾವಣಾ ಅಕ್ರಮದ ಮೂಲಕ ಚುನಾವಣೆಯಲ್ಲಿ ಕಾಂಗ್ರೆಸ್ಸಿನವರು ಸೋಲಿಸಿದ್ದರು ಎಂದು ಸಿಎಂ ಸಿದ್ದರಾಮಯ್ಯ ಅವರೇ ಹೇಳಿದ್ದರು ಎಂದು ನೆನಪಿಸಿದರು.

ದೇಶದ ಇತಿಹಾಸದಲ್ಲಿ ಶ್ರೀಮತಿ ಇಂದಿರಾಗಾಂಧಿ ಚುನಾವಣಾ ಅಕ್ರಮಕ್ಕಾಗಿ ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾದ ಮೊದಲ ಪ್ರಧಾನಿ ಎಂದು ಹೇಳಿದರು. ಅಂದರೆ ಕಾಂಗ್ರೆಸ್ ಚುನಾವಣಾ ಅಕ್ರಮಗಳನ್ನು ಮಾಡುವುದು ತನ್ನ ರಾಜಕೀಯ ಚಟುವಟಿಕೆಯ ಭಾಗವಾಗಿ ಇಟ್ಟುಕೊಂಡಿದೆ ಎಂದು ಟೀಕಿಸಿದರು.
ಇವಿಎಂ ಇರುವುದರಿಂದ ಕಾಂಗ್ರೆಸ್ಸಿನವರಿಗೆ ಅಕ್ರಮ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು. ಕಾಂಗ್ರೆಸ್ ಅಕ್ರಮ ಮಾಡುವುದಿದ್ದರೆ ಮತ್ತೆ ಬ್ಯಾಲೆಟ್ ಪೇಪರ್ ತರಬೇಕು ಅನ್ನುವುದು ಕಾಂಗ್ರೆಸ್ಸಿನ ಇರಾದೆ ಎಂದು ಜನಸಾಮಾನ್ಯರು ಮಾತನಾಡುತ್ತಿದ್ದಾರೆ ಎಂದು ತಿಳಿಸಿದರು.

ಸಿದ್ದರಾಮಯ್ಯ ಅವರ ಕೈಯಲ್ಲೇ ಕಾನೂನು ವ್ಯವಸ್ಥೆ ಇದೆ. ಜಿಲ್ಲಾಧಿಕಾರಿಗಳು ಮತ್ತು ಪ್ರಿಸೈಡಿಂಗ್ ಆಫೀಸರ್ ನಿಯಂತ್ರಿಸುವ ಈ ರಾಜ್ಯ ಸರ್ಕಾರ, ಚುನಾವಣಾ ಅಕ್ರಮ ನಡೆಯುತ್ತದೆ ಎಂದರೆ ಅದನ್ನು ಬೆಳಿಕಿಗೆ ತರುವುದಕ್ಕೆ ಇದಕ್ಕಿಂತ ಅವಕಾಶ ಇನ್ಯಾರಿಗೆ ಸಿಗಬಹುದು ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದರು.
 
ಧರ್ಮಸ್ಥಳದಲ್ಲಿ ಸತ್ಯವನ್ನು ಹೊರಗೆ ತರಬೇಕು ಎನ್ನುವ ಕಾರಣಕ್ಕಾಗಿ ಎಸ್‍ಐಟಿ ರಚಿಸಿದ್ದೇವೆ ಎಂದು ಹೇಳಿದ್ದರು. ಸಿದ್ದರಾಮಯ್ಯ ಅವರ ಸರ್ಕಾರ ಇವಿಎಂ ನಲ್ಲಿ ಅಕ್ರಮ ನಡೆಯುತ್ತಿದೆ ಅನ್ನುವುದಾದರೆ ಅದನ್ನು ಹೊರಗೆ ತರುವುದಕ್ಕೆ ಡಬಲ್ ಎಸ್‍ಐಟಿ ಮಾಡಿ ಎಂದು ಅವರು ಒತ್ತಾಯಿಸಿದರು. ನಿಮ್ಮನ್ನು ತಡೆದವರು ಯಾರು?; ಇದಕ್ಕಿಂತ ನಿಮಗೆ ಒಳ್ಳೆ ಅವಕಾಶ ಬೇರೆ ಸಿಗುವುದಕ್ಕೆ ಸಾಧ್ಯವೇ ಎಂದು ಕೇಳಿದರು. 

ಈ ಅಪಪ್ರಚಾರದ ಬಗ್ಗೆ ನಿಮಗೆ ಶಕ್ತಿ ಇದ್ದರೆ, ನಿಮಗೆ ನೈತಿಕತೆ ಇದ್ದರೆ ಹಾಗೂ ನಿಮಗೆ ಧೈರ್ಯವೇ ಇದ್ದರೆ ನಿಮ್ಮಲ್ಲೇ ಕಾನೂನು, ಪೊಲೀಸ್ ಇಲಾಖೆ, ಅಧಿಕಾರಿಗಳು ಇರುವಾಗ ತನಿಖೆ ನಡೆಸಿ ಅಕ್ರಮವನ್ನು ಬೆಳಕಿಗೆ ತನ್ನಿ ಎಂದು ಸವಾಲು ಹಾಕಿದರು. ಇದಕ್ಕೆ ಈ ರಾಜ್ಯದ ಜನ ಮತ್ತು ದೇಶದ ಜನ ಉತ್ತರವನ್ನು ಕೊಡುತ್ತಾರೆ ಹಾಗೂ ಬೆಲೆ ಏರಿಕೆಯಿಂದ ಬೇಸತ್ತಿರುವ ರಾಜ್ಯದ ಜನ ಮುಂದಿನ ದಿನಗಳಲ್ಲಿ ನಿಮಗೆ ತಕ್ಕ ಉತ್ತರವನ್ನು ನೀಡುತ್ತಾರೆ ಎಂದು ತಿಳಿಸಿದರು.
 
 

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ, ರಷ್ಯಾಗೆ ಡೊನಾಲ್ಡ್ ಟ್ರಂಪ್ ಬ್ರೇಕಪ್ ಮೆಸೇಜ್: ಈವಯ್ಯನಿಗೆ ಏನಾಗಿದೆ ಅಂತಿದ್ದಾರೆ ಪಬ್ಲಿಕ್